ಬೆಂಗಳೂರು: ಸ್ವಿಗಿ,ಉಬರ್, ಓಲಾ, ಫ್ಲಿಪ್ ಕಾರ್ಟ್ ಸೇರಿ ಆ್ಯಪ್ ಆಧಾರಿತ ಕಂಪನಿಗಳ ನೌಕರರಿಗೆ ಸಾಮಾಜಿಕ ಸೇವಾ ಭದ್ರತೆ ನೀಡುವ ನಿಟ್ಟಿನಲ್ಲಿ ವರದಿ ನೀಡುವಂತೆ ಕಾರ್ಮಿಕ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಿಗಿ, ಉಬರ್, ಓಲಾ, ಫ್ಲಿಪ್‌ಕಾರ್ಟ್ ಸೇರಿ ಆ್ಯಪ್ ಆಧಾರಿತ ಕಂಪನಿಗಳ ನೌಕರರಿಗೆ ಸಾಮಾಜಿಕ ಭದ್ರತೆ ನೀಡಲು ಯತ್ನಿಸಲಿದ್ದೇವೆ. ಸಾಮಾಜಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತ ಬಾಲಕೃಷ್ಣ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಾಲಕೃಷ್ಣ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿ, ಒಂದು ತಿಂಗಳಲ್ಲಿ ಆ್ಯಪ್ ಆಧಾರಿತ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಸಂಬಂಧ ಶಿಫಾರಸು ಮಾಡಿ ವರದಿ ಕೊಡಲು ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾಂಟ್ರಾಕ್ಟ್ ಕಾರ್ಮಿಕರಲ್ಲಿ ಹೆಚ್ಚು ಸಮಸ್ಯೆ ಇದ್ದು, ಅವರಿಗೆ ಅಗತ್ಯ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕಾಂಟ್ರಾಕ್ಟ್ ಲೇಬರ್ ಕಾಯ್ದೆಯಲ್ಲಿನ ಕೋರ್ ಮತ್ತು ನಾನ್ ಕೋರ್ ಆಕ್ಟಿವಿಟೀಸ್ ಎಂಬ ಎರಡು ವಿಭಾಗ ಇದ್ದು, ಅದಕ್ಕೆ ಬದಲಾವಣೆ ತರಲು ಚಿಂತನೆ ನಡೆದಿದೆ ಎಂದು ತಿಳಿಸಿದರು.ಕಾರ್ಮಿಕರು ಮತ್ತು ಮಾಲೀಕರ ನಡುವಿನ ಸಂಧಾನ ಪ್ರಕ್ರಿಯೆ ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ಧರಿಸಿದ್ದೇವೆ. ಅನೇಕ ಕಾರ್ಮಿಕ ಸಂಘಟನೆಗಳು ಇವೆ. ಈ ಪೈಕಿ ಪ್ರಮುಖ ಕಾರ್ಮಿಕ ಸಂಘಟನೆಗಳನ್ನು ಸರ್ಕಾರದಿಂದ ಅಂಗೀಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.