ಬೆಂಗಳೂರು: ಸಾಮಾಜಿಕ ನ್ಯಾಯ ಅನ್ನೋದು ಕೇವಲ ಭಾಷಣದ ಸರಕಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡೋರು ಏನು ಕೊಡುಗೆ ಕೊಟ್ಟಿದ್ದಾರೆ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಮೈಸೂರು ರಸ್ತೆಯ ರಾಮಾನುಜ ಮಠದ ಆವರಣದಲ್ಲಿ ಹಿಂದುಳಿದ, ದಲಿತ ಮಠಾಧೀಶರು ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡುತ್ತಾ, ಕೇವಲ ಭಾಷಣ ಮಾಡಿದ್ರಿ ಏನು ಸಾಮಾಜಿಕ ನ್ಯಾಯ ಕೊಟ್ರಿ?. ಕೆಲವರು ನಾವೇ ಸಾಮರ್ಥ್ಯವಂತರು ಅನ್ನೋ ಭ್ರಮೆಯಲ್ಲಿದ್ದಾರೆ. ಅಂಥವರಿಗೆ ಅವರ ಸ್ಥಾನವನ್ನು ಜನರೇ ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ನನಗೆ ಭ್ರಮೆ ಇಲ್ಲ, ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಚಿಂತನೆಯಡಿ ನಾನು ಕೆಲಸ ಮಾಡ್ತಿದ್ದೇನೆ. ಕೆಲವರು ಸಾಮರ್ಥ್ಯದ ಬಗ್ಗೆ ಮಾತಾಡ್ತಾರೆ. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬೋದೇ ಸಾಮರ್ಥ್ಯ. ಭಾಷಣದಿಂದ ಸಾಮರ್ಥ್ಯ ಬರಲ್ಲ. ವಿದ್ಯೆ ಇಲ್ಲದಿರೋರಿಗೆ ವಿದ್ಯೆ, ಕೆಲಸ ಇಲ್ಲದಿರೋರಿಗೆ ಕೆಲಸ ಕೊಡೋದೇ ಸಾಮರ್ಥ್ಯ. ನಮ್ಮ ಕೃತಿಯಿಂದ ನಮ್ಮನ್ನು ಅಳೆಯಿರಿ. ಇನ್ನೊಬ್ಬರನ್ನು ಬೈದು ನಾವು ಮತ ಕೇಳಲ್ಲ. ನಾವು ಮಾಡಿರೋ ಕೆಲಸ ಇಟ್ಟು ಮತ ಕೇಳ್ತೀವಿ. ನಮ್ಮ ರಿಪೋರ್ಟ್ ಕಾರ್ಡ್ ಮುಂದೆ ಇಟ್ಟು ಮತ ಕೇಳ್ತೇವೆ. ನಮ್ಮ ಕೆಲಸ ನೋಡಿ ಆಶೀರ್ವದಿಸಿ ಎಂದು ಹೇಳಿದರು.
ನಮಗೆ ನಿಮ್ಮ ಆಶೀರ್ವಾದ ಬೇಕು:ಸಚಿವ ಭೈರತಿ ಬಸವರಾಜು ಮಾತನಾಡಿ, ಮುಂದೆ ನಮ್ಮ ಸರ್ಕಾರ ಮತ್ತೆ ಬರಬೇಕು. ಅದಕ್ಕೆ ಸ್ವಾಮೀಜಿಗಳ ಆಶೀರ್ವಾದ ಬೇಕು. ಇವತ್ತು ಎಲ್ಲ ಸಮುದಾಯಗಳನ್ನು ಸಿಎಂ ಸಮನಾಗಿ ಕಾಣುತ್ತಿದ್ದಾರೆ. ಆ ಕಾರಣಕ್ಕೆ ಹಿಂದುಳಿದ ಮಠಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಸಿಎಂ ಬೊಮ್ಮಾಯಿ ಮೇಲೆ ಮಠಾಧೀಶರ ಆಶೀರ್ವಾದ ಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭ ಮಾತನಾಡಿದ ಸಚಿವ ಮುನಿರತ್ನ, ಸಿಎಂ ಅವರದ್ದು ತಾಯಿ ಹೃದಯ. ಅವರ ಮನಸು, ಕಷ್ಟಕ್ಕೆ ನೆರವಾಗುವ ಗುಣ, ಶೋಷಿತರ ರಕ್ಷಣೆ ಮಾಡುವ ಹೃದಯ. ಹಿಂದುಳಿದ, ದಲಿತ ಸಮುದಾಯಗಳ ಮಠಗಳನ್ನು ಗುರುತಿಸಿ ಅನುದಾನ ಕೊಟ್ಟಿದ್ದಾರೆ. ಇಂತ ತಾಯಿ ಹೃದಯದ ಸಿಎಂ ಮೇಲೆ ಎಲ್ಲ ಶ್ರೀಗಳ ಆಶೀರ್ವಾದ ಇರಲಿ ಎಂದರು.