ಬೆಂಗಳೂರು: ಬಜರಂಗ ದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅವರು ವಿಧಿವಶರಾಗಿದ್ದಾರೆ. ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಇವರು ತಮ್ಮ ಭಾಷಣದ ಮೂಲಕವೇ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅಲ್ಲದೇ ನಮ್ಮಧ್ವನಿ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಸಮಾಜದ ಅಂಕುಡೊಂಕುಗಳನ್ನು ಕಟುವಾಗಿ ಟೀಕೆ ಮಾಡುತ್ತಿದ್ದರು.
2008 ರಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದ ಸಂಬಂಧ ಇವರು ಬಂಧನಕ್ಕೊಳಗಾಗಿದ್ದರು. ಪ್ರಕರಣದಲ್ಲಿ ದೋಷಮುಕ್ತಗೊಂಡು ಹೊರಬಂದ ಅವರು ಬಜರಂಗದಳದ ಆಂತರಿಕ ವಿಷಯಗಳನ್ನು ಹೊರಹಾಕಲು ಮುಂದಾದರು.
ಸಂಘ ಪರಿವಾರದ ಕಟು ಟೀಕಾಕಾರರಾಗಿದ್ದ ಮಹೇಂದ್ರ ಕುಮಾರ್, ಸಾಮಾಜಿಕ ಜಾಗೃತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ವಿರುದ್ಧದ ಎಲ್ಲಾ ಪ್ರತಿಭಟನೆಯಲ್ಲೂ ಇವರು ಮೊದಲಿಗರಾಗಿದ್ದರು.