ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ತಮಿಳುನಾಡಿನ ಮಾಜಿ ಮುಖ್ಯ ಮುಖ್ಯಮಂತ್ರಿ ದಿ. ಜಯಲಲಿತಾಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿ 26 ವರ್ಷ ಕಳೆದಿದೆ. ವಿಧಾನಸೌಧದಲ್ಲಿರುವ ಖಜಾನೆಯಲ್ಲಿ ಕೊಳೆಯುತ್ತಿರುವ ಬೆಲೆಬಾಳುವ ಸೀರೆ, ವಾಚ್, ಚಪ್ಪಲಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಹರಾಜು ಹಾಕಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬುವರು ಪತ್ರ ಬರೆದಿದ್ದಾರೆ.
2016ರಲ್ಲಿ ಜಯಲಲಿತಾ ಮೃತರಾಗಿದ್ದಾರೆ. 1996ರಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪದಡಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 11,344 ಸೀರೆಗಳು, 750 ಜೊತೆ ಚಪ್ಪಲಿ, 250 ಶಾಲುಗಳು ಸೇರಿದಂತೆ ಪೀಠೋಪಕರಣ ಹಾಗೂ ಫರ್ನಿಚರ್ಗಳನ್ನು ಜಪ್ತಿ ಮಾಡಿಕೊಂಡಿದ್ದರು. ಮುಟ್ಟುಗೋಲು ಹಾಕಿ 26 ವರ್ಷ ಸವೆದರೂ ಖಜಾನೆಯಲ್ಲಿ ಇವೆಲ್ಲ ಧೂಳು ತಿನ್ನುತ್ತಿವೆ.
ಈ ನಿಟ್ಟಿನಲ್ಲಿ ಸುಪ್ರೀಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿರುವ ನರಸಿಂಹಮೂರ್ತಿ, ಜಪ್ತಿಯಾದ ವಸ್ತುಗಳನ್ನು ಹರಾಜಿಗೆ ಒಳಪಡಿಸಿದರೆ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಖರೀದಿಸುತ್ತಾರೆ. ಈ ಮೂಲಕ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಜಯಲಲಿತಾ ಮೊದಲ ಅಪರಾಧಿಯಾಗಿದ್ದರು. ಶಿಕ್ಷೆ ಪ್ರಕಟವಾಗುವ ಮುನ್ನ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.
ಹರಾಜು ಹಾಕಿ ಎಂದು ಸುಪ್ರೀಂಗೆ ಸಾಮಾಜಿಕ ಕಾರ್ಯಕರ್ತನ ಮನವಿ 1997ರಲ್ಲಿ ಚಾರ್ಚ್‌ಶೀಟ್ ಸಲ್ಲಿಸಿದ್ದ ಸಿಬಿಐ : 1996ರಲ್ಲಿ ಸಿಬಿಐ ದಾಳಿ ನಡೆಸಿ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದರು. 1997ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 11,344 ಸೀರೆಗಳು, 750 ಜೊತೆ ಚಪ್ಪಲಿ, 250 ಶಾಲುಗಳು, ಎಸಿ 44, ಸೂಟ್‌ಕೇಸ್ 131, ಟೆಲಿಫೋನ್ 33, ಗೋಡೆ ಗಡಿಯಾರ 27, ಫ್ಯಾನ್ 86, ಡೆಕೋರೇಟ್ ಚೇರ್ಸ್ 146, ಟಿಪಾಯಿ 34, ಟೇಬಲ್ 31, ಕಾಟ್ಸ್ 34, ಡ್ರೆಸಿಂಗ್ ಟೇಬಲ್ 9, ಹ್ಯಾಂಗಿಂಗ್ ಲೈಟ್ಸ್ 81, ಸೋಫಾಸೆಟ್ 20, ಡ್ರೆಸ್ಸಿಂಗ್ ಮಿರರ್ ಟೇಬಲ್ 31 ಹಾಗೂ ಕ್ರಿಸ್ಟಲ್ ಕಟ್ ಗ್ಲಾಸೆಸ್ 231, ಐರನ್ ಲಾರ್ಕಸ್ 03, ಪ್ರಿಡ್ಜ್ 12, ಟೆಲಿವಿಷನ್ ಸೆಟ್ 10, ವಿಡಿಯೋ ಕ್ಯಾಮೆರಾ 04, ಟೇಪ್ ರೆಕಾರ್ಡರ್ 24 ಹಾಗೂ 1040 ವಿಡಿಯೋ ಕ್ಯಾಸೆಟ್ ಜಪ್ತಿ ಮಾಡಲಾಗಿತ್ತು. ಅಲ್ಲದೆ, ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಿ ವಿಧಾನಸೌಧದ ಖಜಾನೆಯಲ್ಲಿ ಇಡಲಾಗಿತ್ತು.
ಇದನ್ನೂ ಓದಿ : ಕೋಲಾರ: ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ವಿಕೋಪಕ್ಕೆ ತಿರುಗಿದ ಗಲಾಟೆ