ಬೆಂಗಳೂರು:ದೇಶದಲ್ಲಿ ಸೂಪರ್‌ನ್ಯೂಮರರಿ ಕೋಟಾ ಸೃಷ್ಟಿಸಿರುವುದೇ ದುರ್ಬಲ ವರ್ಗದವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ ರಕ್ಷಿಸಲು ಆಗಿದೆ. ಆದರೆ, ಅದೇ ಕೋಟಾದಡಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಗೆ ಬೋಧನಾ ಶುಲ್ಕ ಪಡೆದುಕೊಳ್ಳುವ ಮೂಲಕ ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಗಿದ್ದ ಖಾಸಗಿ ಎಂಜಿನಿಯರಿಂಗ್ ಕಾಲೇಜಿಗೆ ಹೈಕೋರ್ಟ್ ಅರ್ಜಿದಾರರ ಪರವಾಗಿ ಒಂದು ಲಕ್ಷ ರೂ. ದಂಡ ಠೇವಣಿ ಇಡುವಂತೆ ಸೂಚನೆ ನೀಡಿದೆ.
ಸೂಪರ್ ನ್ಯೂಮರರಿ ವಿದ್ಯಾರ್ಥಿಗೆ ಶುಲ್ಕ ವಿಧಿಸುವ ಮೂಲಕ ಕಾಲೇಜು ವ್ಯವಸ್ಥಿತ ತಾರತಮ್ಯ ಅನುಸರಿಸಿದೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ಬೋಧನಾ ಶುಲ್ಕವನ್ನಾಗಿ ಪಡೆದುಕೊಂಡಿದ್ದ 91,600 ರೂ.ಗಳನ್ನು ಆದೇಶದ ಪ್ರತಿ ಸಿಕ್ಕ ಎರಡು ವಾರಗಳಲ್ಲಿ ಹಿಂದಿರುಗಿಸಬೇಕು ಎಂದು ಸೂಚನೆ ನೀಡಿದೆ.
ವಿದ್ಯಾರ್ಥಿನಿ ಆದಿತ್ಯ ದೀಪಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯಪೀಠ, ಸಂವಿಧಾನದ ಪರಿಚ್ಛೇದ 15(6) ಮತ್ತು 16(6)ಕ್ಕೆ ತಿದ್ದುಪಡಿ ಮಾಡಿರುವುದು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ಒದಗಿಸುವುದಾಗಿದೆ. ಆದರೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಕಾಲೇಜು ಪರೋಕ್ಷವಾಗಿ ಬೋಧನಾ ಶುಲ್ಕ ವಿಧಿಸುವ ಮೂಲಕ ಈ ಪರಿಚ್ಛೇದ ಉಲ್ಲಂಘಿಸಿದೆ ಎಂದು ಅಭಿಪ್ರಾಯ ಪಟ್ಟಿದೆ.
ಸುಪ್ರೀಂಕೋರ್ಟ್ ಇಡಬ್ಲೂಎಸ್ ಮೀಸಲು ನೀತಿಯನ್ನು ಎತ್ತಿಹಿಡಿದಿದೆ. ಜಾತಿ ಹೊರತುಪಡಿಸಿ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಗುರುತಿಸಿ ಮೀಸಲು ಒದಗಿಸಬೇಕಾಗಿದೆ ಎಂದು ಹೇಳಿದೆ. ಇದು ಸ್ವಾತಂತ್ರ್ಯ ನಂತರ ದೇಶದಲ್ಲಿ ಇದ್ದ ಮೀಸಲು ನೀತಿಯನ್ನು ಬದಲಾಯಿಸಿದೆ. ಐತಿಹಾಸಿಕವಾಗಿ ಹಿಂದುಳಿದ ಜಾತಿ ಆಧಾರಿತ ಸಮುದಾಯಗಳನ್ನು ಸಾಮಾಜಿಕ ದೌರ್ಜನ್ಯ, ತಾರತಮ್ಯದಿಂದ ದೂರ ಮಾಡುವುದಾಗಿದೆ ಎಂದು ನ್ಯಾಯಪೀಠ ಹೇಳಿದೆ.