ಬೆಂಗಳೂರು: ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದವರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ವ್ಯಕ್ತಿ ಸೇರಿದಂತೆ ಇಬ್ಬರು ಆರೋಪಿಗಳನ್ನ ಆರ್ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುಂಕದಕಟ್ಟೆಯ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಪ್ರಶಾಂತ್ ಹಾಗೂ ಸೋಮುಗೌಡ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಕರಣದ ವಿವರ:ಜೂ.21 ರಂದು ಬೆಳಗ್ಗೆ 8.30ರ ಸುಮಾರಿಗೆ ಮಾಗಡಿಯಿಂದ ಗೋಮಾಂಸ ಖರೀದಿಸಿ ಶಿವಾಜಿನಗರಕ್ಕೆ ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ಸಾಗಣೆ ಮಾಡುತ್ತಿದ್ದ ಖಾಜಾ ಮೊಯಿನುದ್ದೀನ್ ಹಾಗೂ ಉಮೇಶ್ ಎಂಬುವವರನ್ನ ತುಮಕೂರು ರಸ್ತೆಯಲ್ಲಿ ಅಡ್ಡಗಟ್ಟಿದ್ದ ಆರೋಪಿ ಪ್ರಶಾಂತ್ ಹಾಗೂ ಸ್ನೇಹಿತರು ನಿಮ್ಮ ವಾಹನ ನಮ್ಮ ಇನ್ನೋವಾ ಕಾರಿಗೆ ಟಚ್ ಆಗಿ ಡ್ಯಾಮೇಜ್ ಆಗಿದೆ. ಹಣ ಕಟ್ಟಿಕೊಡುಬೇಕೆಂದು ಧಮ್ಕಿ ಹಾಕಿದ್ದರು. ಪರಸ್ಪರ ವಾಗ್ವಾದದ ನಡುವೆ ಸ್ಕಾರ್ಪಿಯೋ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವುದನ್ನ ಕಂಡು ಬೆದರಿಸಿ 2 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ನಾಲ್ವರು ಆರೋಪಿಗಳ ಬಂಧನ:ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದರು. ಉಮೇಶ್ ಹಾಗೂ ಖಾಜಾ ಮೊಯಿನುದ್ದೀನ್ ಅವರನ್ನ ಕಾರಿಗೆ ಹತ್ತಿಸಿ ಹಲ್ಲೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಪ್ರಶಾಂತ್ ಹಾಗೂ ಸೋಮು ಗೌಡನನ್ನ ಬಂಧಿಸಿದ್ದಾರೆ. ಮತ್ತೊಂದೆಡೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಹಿನ್ನೆಲೆ ಉಮೇಶ್ ಹಾಗೂ ಖಾಜಾ ಮೊಯಿನುದ್ದೀನ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಒಟ್ಟು ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದಿಂದ ಗೋವಾಕ್ಕೆ ಗೋಮಾಂಸ ಸಾಗಣೆ:ಇತ್ತೀಚೆಗೆಕರ್ನಾಟಕದಿಂದ ಗೋವಾಕ್ಕೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ. ಗೋವಾದ ಮಡಗಾಂವ್ನ ಹುಸೇನ್ ದೇಸಾಯಿ ಹಾಗೂ ಆಜಾದ್ ಕಾದ್ರೊಳ್ಳಿ ಬಂಧಿತರು. ಆರೋಪಿಗಳು ಬೆಳಗಾವಿ ತಾಲೂಕಿನ ಹಾಲಗಿಮರಡಿ ಕ್ರಾಸ್ ಮೂಲಕ ಎರಡು ವಾಹನಗಳಲ್ಲಿ ಅಕ್ರಮವಾಗಿ ಗೋವಾಕ್ಕೆ ಗೋಮಾಂಸ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹಿರೇಬಾಗೆವಾಡಿ ಪೊಲೀಸರು, ಗೋಮಾಂಸ ಸಮೇತ ಇಬ್ಬರು ಆರೋಪಿಗಳು ಮತ್ತು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದರು.