ಬೆಂಗಳೂರು:ಟೆಂಪೋ ಅಡ್ಡಗಟ್ಟಿ ಬರೋಬ್ಬರಿ 57 ಲಕ್ಷ ಮೌಲ್ಯದ ಸ್ಮಾರ್ಟ್ ವಾಚ್ಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಆರ್.ಆರ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಮೀರ್ ಅಹಮದ್ (28) ಹಾಗೂ ಸೈಯದ್ ಶಾಹೀದ್ (26) ಬಂಧಿತ ಆರೋಪಿಗಳು. ಜ.15ರ ರಾತ್ರಿ 10:45ರ ಸುಮಾರಿಗೆ ಆರ್.ಆರ್ ನಗರದ ಜವರೇಗೌಡನ ದೊಡ್ಡಿ ಬಳಿ ಜೈದೀಪ್ ಎಂಟರ್ಪ್ರೈಸಸ್ ಹೆಸರಿನ ವೇರ್ ಹೌಸ್‌ಗೆ ಸೇರಿದ ಟೆಂಪೋವನ್ನ ಅಡ್ಡಗಟ್ಟಿದ್ದ ಆರೋಪಿಗಳು ಇಬ್ಬರ ಮೇಲೆ ಹಲ್ಲೆ ಮಾಡಿ ಟೆಂಪೋ ಸಮೇತ ಪರಾರಿಯಾಗಿದ್ದರು.
57 ಲಕ್ಷ ಮೌಲ್ಯದ ಟೈಟಾನ್ ಕಂಪನಿಯ 23 ಬಾಕ್ಸ್ಗಳಿರುವ 1,282 ವಾಚ್ಗಳಿದ್ದ ಟೆಂಪೋದಲ್ಲಿ ವೇರ್ ಹೌಸ್ ಕೆಲಸಗಾರರಾದ ಜಾನ್ ಮತ್ತು ಬಿಸಾಲ್ ಕಿಸಾನ್ ಮಾಲೂರಿನ ಪ್ಲಿಪ್ ಕಾರ್ಟ್ ಮೂಲಕ ಆರ್.ಆರ್.ನಗರದ ಜವರೇಗೌಡ ನಗರದ ಬಳಿ ಬರುತ್ತಿದ್ದರು. ಆಗ ಒಂದು ಕಾರು ಹಾಗೂ 3 ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ಟೆಂಪೋ ಅಡ್ಡಗಟ್ಟಿ ಕೈಗಳಿಂದ ಹಲ್ಲೆ ಮಾಡಿ ವಾಹನ ಸಮೇತ ವಾಚ್ಗಳನ್ನು ಕೊಂಡೊಯ್ದಿದ್ದರು. ಈ ಸಂಬಂಧ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಿಷ್ಟು:ದೂರುದಾರ ಹನುಮೇಗೌಡನ ಟೆಂಪೋ ಆರೋಪಿಗಳ ಬೈಕ್ಗೆ ಟಚ್ ಮಾಡಿದ್ದ. ಇದರಿಂದ ಅಸಮಾನಧಾನಗೊಂಡ ಆರೋಪಿಗಳು ಟೆಂಪೋ ಹಿಂಬಾಲಿಸಿ ಹಲ್ಲೆ ಮಾಡಿ ವಾಹನ ಸಮೇತ ವಾಚ್ಗಳನ್ನು ಹೊತ್ತೊಯ್ದಿದ್ದರು. ವಾಹನದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಾಚ್ಗಳನ್ನು ತೆಗೆದುಕೊಂಡು ಬೇರೆಡೆ ಸಾಗಾಟ ಮಾಡಿದ್ದರು. ಬಳಿಕ ಟೆಂಪೋವನ್ನು ಅದೇ ಜಾಗದಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದರು. ಆರೋಪಿಗಳ ವಿರುದ್ಧ ಈ ಹಿಂದೆ ಕ್ರಿಮಿನಲ್ ಕೇಸ್ಗಳು ದಾಖಲಾಗಿಲ್ಲ. ಸದ್ಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.