ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿ ಪರಿಶೀಲಿಸಿದ್ದು, ಯೋಜನೆಗಳ ಪ್ರಗತಿ ಕುರಿತು ಮಾಹಿತಿ ಪಡೆದರು.
ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಯುಡಿಡಿ ಅಪರ ಮುಖ್ಯಕಾರ್ಯದರ್ಶಿ ಹಾಗೂ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಕಾಮಗಾರಿ ಸ್ಥಳದಲ್ಲಿ ರಸ್ತೆಯ ಮೇಲೆ ಮತ್ತು ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಡೆಬ್ರಿಸ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಲು ಕೈಗೊಂಡ ಕ್ರಮದ ಬಗ್ಗೆ ಮಾತುಕತೆ ನಡೆಯಿತು.
ರಸ್ತೆ ಕಾಮಗಾರಿ ಜಾರಿಯಿರುವ ಭಾಗಗಳಲ್ಲಿ ಶೇಖರಣೆಗೊಂಡಿರುವ ನಿರ್ಮಾಣ ಸಾಮಗ್ರಿಗಳಲ್ಲಿ ತಕ್ಷಣಕ್ಕೆ ಅಗತ್ಯ ಇರುವುದನ್ನು ಮಾತ್ರ ರಸ್ತೆಯ ಪಕ್ಕದ ಸ್ಥಳ ಅಥವಾ ಪಾದಚಾರಿ ಮಾರ್ಗಗಳ ಮೇಲೆ ಓಡಾಟ ಮತ್ತು ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಯಾಗದಂತೆ ಸಂಗ್ರಹಿಸಿಟ್ಟುಕೊಳ್ಳುವ ಕುರಿತು ಕೈಗೊಂಡಿರುವ ಕ್ರಮದ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಕಾಮಗಾರಿ ನಡೆಯುತ್ತಿರುವ ಸ್ಥಳ ಮತ್ತು ರಸ್ತೆ ಅಗೆದಿರುವ ಭಾಗಗಳಲ್ಲಿ ಬ್ಯಾರಿಕೇಡಿಂಗ್ ಮಾಡಿರುವುದು, ಆರ್ಟೀರಿಯಲ್ ಮತ್ತು ಸಬ್ - ಆರ್ಟೀರಿಯಲ್ ರಸ್ತೆಗಳ ವಾರ್ಷಿಕ ನಿರ್ವಹಣೆ ಗುತ್ತಿಗೆಯನ್ನು ನೀಡಿದ್ದು, ರಸ್ತೆ ಬದಿಯ ಚರಂಡಿ, ಶೋಲ್ಡರ್ ಡ್ರೇನ್ಸ್ (Shoulder Drains) ಗಳಲ್ಲಿ ಮಣ್ಣು ಶೇಖರಣೆಯಾಗದಂತೆ ಕ್ರಮದ ಬಗ್ಗೆ ತಿಳಿಸಿದರು.