ಬೆಂಗಳೂರು: ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬಾಲಕಿ ಸಾವನ್ನಪ್ಪಿರುವ ಘಟನೆ ಕುಮಾರಸ್ವಾಮಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತ ಬಾಲಕಿಯನ್ನು ಪೂರ್ವಿಕಾ ರಾವ್ (4) ಎಂದು ಗುರುತಿಸಲಾಗಿದೆ.
ಬೆಳಗ್ಗೆ ಮಗಳು ಪೂರ್ವಿಕಾಳನ್ನ ತಂದೆ ಪ್ರಸನ್ನ ಶಾಲೆಗೆ ಬಿಡಲು ಬೈಕ್ನಲ್ಲಿ ಹೋಗುವಾಗ ಹಿಂಬದಿಯಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರಸನ್ನ ರಸ್ತೆಯ ಎಡಬದಿಗೆ ಬಿದ್ದರೆ ಪೂರ್ವಿಕಾ ಬಲಗಡೆ ಬಿದ್ದಿದ್ದಾಳೆ. ಈ ವೇಳೆ ಬಾಲಕಿ ಮೇಲೆ ಬಸ್ ಹರಿದಿದೆ. ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪೂರ್ವಿಕಾ ಬೆಂಗಳೂರು ಇಂಟರ್ ನ್ಯಾಷನಲ್ ಶಾಲೆಯಲ್ಲಿ ಫ್ರೀಕೆಜಿ ವ್ಯಾಸಂಗ ಮಾಡುತ್ತಿದ್ದಳು. ಪ್ರತಿದಿನ ತಂದೆ ಮಗಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದರು. ಎಂದಿನಂತೆ ಇಂದು ಬೆಳಗ್ಗೆ ಶಾಲೆಗೆ ಬಿಡಲು ತೆರಳಿದ್ದಾಗ ಘಟನೆ ನಡೆಯಿತು. ತನಿಖೆ ವೇಳೆ ಬಿಎಂಟಿಸಿ ಬಸ್ ಚಾಲಕನದ್ದೇ ತಪ್ಪು ಎಂದು ತಿಳಿದು ಬಂದಿದೆ. ಬಿಎಂಟಿಸಿ ಬಸ್ ಮತ್ತು ಚಾಲಕ ಬಸವರಾಜ ಪೂಜಾರಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸ್ಕೂಟರ್ ಸವಾರನನ್ನು ಬಲಿ ಪಡೆದ BMTC ಬಸ್: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ವ್ಯಕ್ತಿ ಇಲ್ಲಿನ ಸಿದ್ದಯ್ಯ ಜಂಕ್ಷನ್ನಿಂದ ಕ್ವೀನ್ಸ್ ರಸ್ತೆಯಲ್ಲಿ ಸಂಚರಿಸುವಾಗ ದುರ್ಘಟನೆ ನಡೆದಿತ್ತು.
ಸಿದ್ದಯ್ಯ ಜಂಕ್ಷನ್ನಿಂದ ಕ್ವೀನ್ಸ್ ರಸ್ತೆ ಕಡೆ ಟಿವಿಎಸ್ ಜ್ಯೂಪಿಟರ್ ಸ್ಕೂಟರ್ನಲ್ಲಿ ಬರುತ್ತಿದ್ದ ವ್ಯಕ್ತಿಗೆ ಬಸ್ ಡಿಕ್ಕಿಯಾಗಿತ್ತು. ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದ ಸವಾರನ ಮುಖದ ಮೇಲೆ ಬಸ್ ಹಿಂಬದಿ ಚಕ್ರ ಹರಿದಿತ್ತು. ಪರಿಣಾಮ, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಘಟನೆಗೆ ಕಾರಣನಾದ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಇಬ್ಬರು ಪಾದಚಾರಿಗಳು ಸಾವು:ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಬ್ಬರು ಪಾದಚಾರಿಗಳು ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ ಕಳೆದ ಜೂನ್ 15ರಂದು ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ನಡೆದಿತ್ತು. ಮೃತರನ್ನು ಕೊಪ್ಪಳ ಮೂಲದ ಕುಂಟ್ಯಪ್ಪ ಪೂಜಾರ್ (35) ಹಾಗೂ ತುರುವೆಕೆರೆ ಬಳಿಯ ವಿಟ್ಲಪುರ ಮೂಲದ ತಿಮ್ಮೆಗೌಡ (25) ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ :Bike Accident : ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿ.. ಅತಿ ವೇಗಕ್ಕೆ ಎರಡು ಜೀವಗಳು ಬಲಿ, ಓರ್ವನಿಗೆ ಗಾಯ