ಬೆಂಗಳೂರು:ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಇತ್ತೀಚೆಗೆ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ಎಸ್.ಎಂ. ಕೃಷ್ಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕನ್ನಡಿಗರ ಅಸ್ಮಿತೆಯ ಪ್ರತೀಕ ಕನ್ನಡ ಸಾಹಿತ್ಯ ಪರಿಷತ್ತು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿತು. ಸಮಸ್ತ ಕನ್ನಡಿಗರ ಪರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಎಸ್.ಎಂ. ಕೃಷ್ಣ ಅವರಿಗೆ ಗೌರವ ಸಮರ್ಪಣೆ ಮಾಡಿದರು.
ತವರು ಮನೆಯ ಗೌರವ ದಕ್ಕಿದೆ: ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಗೌರವವನ್ನು ಸಂತಸದಿಂದ ಸ್ವಿಕರಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಗೌರವ ತವರು ಮನೆಯ ಗೌರವಕ್ಕೆ ಸರಿಸಮನಾಗಿದೆ. ಈ ಗೌರವ ಸಮಸ್ತ ಕನ್ನಡಿಗರಿಂದ ಪ್ರದಾನ ಮಾಡಲಾಗಿದೆ. 7 ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ಬೆಳೆವಣಿಗೆಯನ್ನು ಗಮನಿಸುತ್ತಾ ಇರುವೆ. ಪ್ರಪಂಚದಾದ್ಯಂತ ಹರಡಿ ಹಂಚಿ ಹೋಗಿರುವ ಕನ್ನಡಿಗರನ್ನು ಒಂದುಗೂಡಿಸಲು ನಾಡೋಜ ಡಾ ಮಹೇಶ ಜೋಶಿ ಕೈಗೊಂಡ ಕ್ರಮ ಸ್ವಾಗತಾರ್ಹ, ಅವರ ಕಾರ್ಯತತ್ಪರತೆ ಕಂಡಾಗ ಸಾಹಿತ್ಯ ಪರಿಷತ್ತಿಗೆ ಸೂಕ್ತ ಸಾರಥಿ ಸಿಕ್ಕಿದ್ದಾರೆ ಎನ್ನುವಲ್ಲಿ ಸಂಶಯವಿಲ್ಲ ಎಂದು ಶ್ಲಾಘಿಸಿದರು.
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿ: ಹಾವೇರಿಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾಖಲೆ ರೀತಿಯಲ್ಲಿ ಯಶಸ್ವಿಗೊಳಿಸಿದ್ದಾರೆ. ಅದೇ ರೀತಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಭರ್ಜರಿಯಾಗಿ ನಡೆಸುವ ಮೂಲಕ ದಾಖಲೆ ಸೃಷ್ಟಿಮಾಡುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಅದನ್ನು ನಾಡೋಜ ಡಾ. ಮಹೇಶ ಜೋಶಿ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಮ್ಮೇಳಕ್ಕೆ ತಮ್ಮ ಸಲಹೆ ಸಹಕಾರ ಕಾಲ ಕಾಲಕ್ಕೆ ಇರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಭರವಸೆ ವ್ಯಕ್ತಪಡಿಸಿದರು.