ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಬಂದರಿನಲ್ಲಿ ರಸಗೊಬ್ಬರ ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣ ಪೊಟ್ಯಾಷ್ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.
ಎಮ್.ಒ.ಪಿ ರಸಗೊಬ್ಬರದ ಪರಿಷ್ಕೃತ ಗರಿಷ್ಠ ಮಾರಾಟ ಬೆಲೆ ಪ್ರತಿ ಚೀಲಕ್ಕೆ 1700 ರೂ. ಇದೆ. ಈ ಹಿಂದೆ 950ರಿಂದ 1150 ರೂ.ಇತ್ತು. ಈಗ ಸುಮಾರು 700ರೂ. ಹೆಚ್ಚಿಗೆಯಾದಂತಾಗಿದೆ. ಕಳೆದ ನಾಲ್ಕು ತಿಂಗಳುಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದಂತೆ ಎಮ್.ಒ.ಪಿ ರಸಗೊಬ್ಬರದ ಬೆಲೆಯು ಸಹ ಏರಿಕೆಯಾಗಿದ್ದು, ಇದರಿಂದ ಎಮ್.ಒ.ಪಿ ರಸಗೊಬ್ಬರದ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 11 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್; 146 ಒಮಿಕ್ರಾನ್ ಸೋಂಕಿತರು ಪತ್ತೆ
ಆದಾಗ್ಯೂ ಇಂಡಿಯನ್ ಪೊಟ್ಯಾಷ್ ಲಿಮಿಟೆಡ್ ಸಂಸ್ಥೆಯು ಅಂತಾರಾಷ್ಟ್ರೀಯ ಸರಬರಾಜುದಾರರೊಂದಿಗೆ ಎಮ್.ಒ.ಪಿ ರಸಗೊಬ್ಬರ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಪ್ರಸ್ತುತವಿರುವ ರಸಗೊಬ್ಬರದ ವಿನಿಮಯ ದರ, ಹೊಸ ಆಮದು ಬೆಲೆ, ಕಸ್ಟಮ್ಸ್ ಸುಂಕ ಹಾಗೂ ಜಿ.ಎಸ್.ಟಿ, ಬಂದರಿನಲ್ಲಿ ರಸಗೊಬ್ಬರದ ನಿರ್ವಹಣೆಯ ಇತರ ವೆಚ್ಚಗಳು ಸೇರಿ ಒಟ್ಟು ದರವು ಪ್ರತಿ ಟನ್ ಗೆ 40,147 ರೂ. ಎಂದು ನಿಗದಿಪಡಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರವು ಪುತಿ ಟನ್ ಎಮ್.ಒ.ಪಿ ಗೆ ನೀಡುವ ರಿಯಾಯಿತಿ ದರ 6,070 ರೂ. ಹೊರತುಪಡಿಸಿದಲ್ಲಿ ಪ್ರತಿ ಟನ್ ನ ಮಾರಾಟ ದರವು 34,000 ರೂ. ಆಗುತ್ತದೆ. ಹಾಗಾಗಿ ಪ್ರತಿ ಚೀಲದ ದರವು 1700 ರೂ. ಆಗಿರುತ್ತದೆ ಎಂದು ಇಲಾಖೆ ತಿಳಿಸಿದೆ.