ಬೆಂಗಳೂರು: ರಾಜ್ಯದಲ್ಲಿನ ಕಲ್ಲಿದ್ದಲು ಕೊರತೆ ಸ್ವಲ್ಪ ಮಟ್ಟಿಗೆ ಸುಧಾರಣೆ ಕಾಣುತ್ತಿದೆ. ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಸುಧಾರಿಸುತ್ತಿದ್ದು, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿನ ವಿದ್ಯುತ್ ಉತ್ಪಾದನೆಯೂ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.
ಕಲ್ಲಿದ್ದಲು ಕೊರತೆ, ಸದ್ಯ ರಾಜ್ಯವನ್ನು ಕಾಡುತ್ತಿರುವ ಸಮಸ್ಯೆ. ಕಲ್ಲಿದ್ದಲು ಕೊರತೆಯಿಂದಾಗಿ ರಾಜ್ಯವನ್ನು ಕತ್ತಲ ಕೂಪಕ್ಕೆ ತಳ್ಳುವ ಭೀತಿ ಎದುರಾಗಿದೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಪರಿಣಮವಾಗಿ ಸ್ವಲ್ಪ ಮಟ್ಟಿಗೆ ಕಲ್ಲಿದ್ದಲ ಪೂರೈಕೆಯಲ್ಲಿ ಚೇತರಿಕೆ ಕಾಣುತ್ತಿದೆ. ಇದರಿಂದಾಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲೂ ಹೆಚ್ಚಳವಾಗಿದೆ.
ಸದ್ಯದ ಕಲ್ಲಿದ್ದಲು ಪೂರೈಕೆ ಸ್ಥಿತಿಗತಿ ಹೇಗಿದೆ?:
ಕಲ್ಲಿದ್ದಲು ಪೂರೈಕೆಯಲ್ಲಿ ಸುಧಾರಣೆ ಕಾಣುತ್ತಿದೆ. ಮಹಾರಾಷ್ಟ್ರ ಹಾಗೂ ಸಿಂಗರೇಣಿಯಿಂದ ರಾಜ್ಯಕ್ಕೆ ಇದೀಗ ಕಲ್ಲಿದ್ದಲು ಸರಬರಾಜು ಸ್ವಲ್ಪಮಟ್ಟಿಗೆ ಸುಧಾರಣೆ ಕಾಣುತ್ತಿದೆ. ಕಳೆದ ಹಲವು ತಿಂಗಳಿಂದ 7-8 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಇದೀಗ 10-12 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ.
ಒಂದು ರೇಖ್ ಸುಮಾರು 4,000 ಟನ್ ಕಲ್ಲಿದ್ದಲು ಹೊಂದಿರುತ್ತದೆ. ಒಂದು ಸ್ಥಾವರಕ್ಕೆ ಸುಮಾರು 25,000 ಟನ್ ಕಲ್ಲಿದ್ದಲು ಬೇಕಾಗುತ್ತದೆ. ಆದರೆ ಕಳೆದ ಕೆಲ ದಿನಗಳಿಂದ ಸುಮಾರು 8,000 ಟನ್ ಅಷ್ಟೇ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಇದರಿಂದ ತೀವ್ರ ಕಲ್ಲಿದ್ದಲ ಕೊರತೆ ಎದುರಾಗಿತ್ತು. ಕಲ್ಲಿದ್ದಲ ಕೊರತೆಯಿಂದ ಶಾಖೋತ್ಪಾದನೆ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿತ್ತು. ಮೂರೂ ಸ್ಥಾವರಗಳಲ್ಲಿ ಕೇವಲ ಶೇ 50ರಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿತ್ತು.