ಬೆಂಗಳೂರು: ರಾಜ್ಯದ ಯುವಜನತೆಗೆ ಸೂಕ್ತ ಉದ್ಯೋಗಾವಕಾಶಗಳು ಸಿಗುವಂತಾಗಬೇಕು ಎನ್ನುವ ಗುರಿಯೊಂದಿಗೆ ಈವರಗೆ 10 ಲಕ್ಷಕ್ಕೂ ಹೆಚ್ಚು ಯುವಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ್ ಹೇಳಿದರು.
ಶುಕ್ರವಾರ ಸರ್ಕಾರಿ ರಾಮನಾರಾಯಣ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ನಿಗಮದಿಂದ ಏರ್ಪಡಿಸಿದ್ದ ಉದ್ಯೋಗ ಮೇಳ ಪ್ರಗತಿ ಪಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಇದರಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಆನ್ ಲೈನ್ ನೋಂದಣಿ ಮಾಡಿಕೊಂಡು ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಟೊಯೋಟಾ ಬಿಡದಿ ಘಟಕದಲ್ಲಿ ಹೊಸ ಯೋಜನೆಗಳಿಗೆ ಚಾಲನೆ ಕೊಟ್ಟ ಸಚಿವ ಅಶ್ವತ್ಥ ನಾರಾಯಣ್
ಯುವಜನರನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಲು ಸರ್ಕಾರ ಸಿದ್ಧವಾಗಿದೆ. ಹೀಗಾಗಿ, ಪದವಿ ಕೋರ್ಸ್ಗಳಲ್ಲಿ ಡಿಜಿಟಲ್, ಹಣಕಾಸು ಮತ್ತು ತಂತ್ರಜ್ಞಾನ ಸಾಕ್ಷರತೆಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ವಿವರಿಸಿದರು.
ನುರಿತ ಮಾನವ ಸಂಪನ್ಮೂಲ ಪೂರೈಸಲು ಸಾಧ್ಯವಾಗುತ್ತಿಲ್ಲ: ಸೂಕ್ತ ವಿದ್ಯಾಭ್ಯಾಸ, ತಕ್ಕ ಅರ್ಹತೆ ಮತ್ತು ಆಧುನಿಕ ಕೌಶಲ್ಯಗಳು ಇದ್ದರೆ ಅವಕಾಶಗಳಿಗೆ ಬರವಿಲ್ಲ. ವಾಸ್ತವವಾಗಿ ಉದ್ಯಮ ರಂಗವು ಬಯಸುತ್ತಿರುವಷ್ಟು ನುರಿತ ಮಾನವ ಸಂಪನ್ಮೂಲವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ನುಡಿದರು.