ಬೆಂಗಳೂರು: ಸರ್ಕಾರದ ಆರನೇ ಗ್ಯಾರಂಟಿ ಅಂದರೆ ಅದು ರೈತರ ಆತ್ಮಹತ್ಯೆ. ಆತ್ಮಹತ್ಯೆ ಅನ್ನುವ ಆರನೇ ಗ್ಯಾರಂಟಿ ಕೊಟ್ಟಿದ್ದಾರೆ. ಇದು ಬಡವರ ಸರ್ಕಾರನಾ? ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ಪ್ರಶ್ನಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚಳಿಗಾಲ ಶುರುವಾಗುತ್ತಿದೆ. ಮಳೆಗಾಲ ಹೋಯ್ತು. ಇನ್ನೇನು ಬೆಳೆಯಲು ಸಾಧ್ಯ. ಈ ಸರ್ಕಾರಕ್ಕೆ ಕಣ್ಣು, ಕಿವಿ ಎರಡೂ ಇಲ್ಲ. ಜನತಾ ದಳ ಮುಗಿದೋಯ್ತು ಅಂತಾ ಇದ್ದಾರೆ ಅಷ್ಟೇ. ಇಂಥ ದುಸ್ಥಿತಿ ಯಾವತ್ತೂ ಬಂದಿಲ್ಲ ಎಂದು ಕಿಡಿಕಾರಿದರು. ಅಲ್ಲದೆ ಇನ್ನೊಂದೆಡೆ ಗುತ್ತಿಗೆದಾರರು ಸಾಯುತ್ತಿದ್ದಾರೆ. ಕೆಂಪಣ್ಣ ಅವರ ಪತ್ತೆನೇ ಇಲ್ಲ, ಈಗ ಬನ್ನಿ ಅದೆಲ್ಲಿ ಇದ್ದೀರಾ? ಎಂದು ವಾಗ್ದಾಳಿ ನಡೆಸಿದರು. ಸರ್ಕಾರ ಬಂದು ಮೂರ್ನಾಲ್ಕು ತಿಂಗಳಾಯ್ತು. ಐದು ಗ್ಯಾರಂಟಿ ತರುವುದೇ ನಮ್ಮ ಗುರಿ ಎಂದು ಹೇಳಿದ್ದರು. ಮೈಸೂರಿನಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೀತು. ತಮ್ಮ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರದಿಂದ ರೈತರ ನಿರ್ಲಕ್ಷ್ಯ :ಕೃಷಿ ಕ್ಷೇತ್ರ ಅಭಿವೃದ್ಧಿ ಆಗದೇ ದೇಶ ಉದ್ಧಾರ ಆಗಲ್ಲ. ಈ ಮೂಲಕ ರೈತರು ಉದ್ಧಾರ ಆಗಬೇಕು. ನೀವು ಬಂದು ಐದು ತಿಂಗಳಾಗಿದೆ. ಸರ್ಕಾರದ ವರದಿ ಪ್ರಕಾರ 4 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. 40 ಲಕ್ಷ ಹೆಕ್ಟೇರ್ ನಷ್ಟು ಬೆಳೆ ಒಣಗಿದೆ ಎಂದು ವರದಿ ಕೊಟ್ಟಿದ್ದಾರೆ. ಹಿಂದೆಂದೂ ಕಂಡರಿಯದ ಬರಗಾಲ ಇದೆ. ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಪಿಎಂ ಕಿಸಾನ್ ಯೋಜನೆ ಅಡಿ, ರಾಜ್ಯ ಸರ್ಕಾರ ನೀಡುತ್ತಿದ್ದ ನಾಲ್ಕು ಸಾವಿರ ಹಣ ನಿಲ್ಲಿಸಿದ್ದಾರೆ. ಇಷ್ಟೆಲ್ಲ ಮಾಡಿ ಈಗ ರೈತರ ಬಗ್ಗೆ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಮಾಡಲು ಸಾಧ್ಯವಾಗ್ತಾ ಇಲ್ಲ, ಎನ್ಡಿಆರ್ಎಫ್ ಮೂಲಕ ಹಣ ನೀಡಿ ಎಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಹೇಳುತ್ತಿದ್ದರು. ಆದರೆ ನಿಮ್ಮ ಸರ್ಕಾರ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ನೀವೇ ಸಿಎಂ ಆಗಿದ್ದೀರ, ನಿಮ್ಮ ಕೈಯಲ್ಲೇ ಸರ್ಕಾರ ಇದೆ ಎಂದು ಜಿಟಿಡಿ ಟೀಕಾ ಪ್ರಹಾರ ನಡೆಸಿದರು.
ಸರ್ಕಾರದ ವಿರುದ್ಧ ಶಾಸಕರ ಅಸಮಾಧಾನ :ನಿಮ್ಮದೇ ಆದ ಶಾಸಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇಂಥ ಪರಿಸ್ಥಿತಿ ಹಿಂದಿನ ಯಾವ ಸರ್ಕಾರದಲ್ಲೂ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಇರಬೇಕಾ?. ಜನ ಗೋಳಾಡುತ್ತಿದ್ದಾರೆ. ಐದು ಗ್ಯಾರಂಟಿ ಕೊಡಿ ಅಂತ ಹೇಳಿದ್ಯಾರು?. ಗ್ಯಾರಂಟಿಯಿಂದ ಏನು ಸಮಸ್ಯೆ ಆಗುತ್ತಿದೆ ಎಂದು ಬಸವರಾಜ ರಾಯರೆಡ್ಡಿ, ಬಿ.ಆರ್ ಪಾಟೀಲ್, ಕಂಪ್ಲಿ ಗಣೇಶ್ ಅವರೇ ಹೇಳ್ತಾ ಇದ್ದಾರೆ. ಗ್ಯಾರಂಟಿಗೆ ಅಂಬೇಡ್ಕರ್, ಬಸವಣ್ಣ ಪ್ರೇರಣೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಮಹದೇವಪ್ಪ ಹೇಳ್ತಾರೆ, ಸಿದ್ದರಾಮಯ್ಯ ಬಸವಣ್ಣ ಇದ್ದಂತೆ ಎಂದು. ಬಿಟ್ಟಿ ಭಾಗ್ಯ ಕೊಡ್ತಾ ಇದ್ದೀರಲ್ಲ. ನೀವು ಹೇಗೆ ಬಸವಣ್ಣ ಆಗ್ತೀರಾ? ಎಂದು ಜಿ ಟಿ ದೇವೇಗೌಡ ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆ ವಿರುದ್ಧ ವಾಗ್ದಾಳಿ :ನೀವು ಅನ್ನಭಾಗ್ಯ ಕೊಡ್ತೀನಿ ಅಂದ್ರಲಾ ಎಲ್ಲಿ ಕೊಟ್ಟಿದ್ದೀರಾ?. ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಅಕ್ಕಿಯನ್ನು ಜನ ಊಟ ಮಾಡ್ತಾ ಇದ್ದಾರೆ. ಈ ಗ್ಯಾರಂಟಿ ಕೂಡ ಸುಳ್ಳು. ಬೆಳಕು ಕೊಡ್ತೀವಿ ಅಂದ್ರು, ಎಲ್ಲರಿಗೂ 200 ಯುನಿಟ್ ಅಂದ್ರು. ಆದರೆ ಸರ್ಕಾರ ಜಾರಿಗೆ ತಂದಿದ್ದು 58 ಯುನಿಟ್. ಇದೂ ಕೂಡ ಸುಳ್ಳು. ಇನ್ನು 2000 ಸಾವಿರ ಕೊಟ್ಟಿದ್ದೀರಲ್ಲ ಅದು ಕೂಡ ಸರಿಯಾಗಿಲ್ಲ. ಯಜಮಾನಿ ಇಲ್ಲದ ಮನೆಯಲ್ಲಿ ಯಜಮಾನನಿಗೆ ಕೊಡಬೇಕಲ್ಲವೇ? ಅದೂ ಸುಳ್ಳು. ಉಚಿತ ಬಸ್ ಘೋಷಣೆ ಮಾಡಿದ್ರು. ಮಹಿಳೆಯರು ಓಡಾಡ್ತಾ ಇದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಸ್ ಕೊರತೆ ಆಗಿದೆ. ಸ್ವಾಭಿಮಾನದಿಂದ ಬದುಕಿ ಅಂತ ಬಸವಣ್ಣನವರು ಹೇಳಿದ್ದು, ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಬೋರ್ ವೆಲ್ ಗಳಲ್ಲಿ ಹಾಗೂ ಆನೇಕ ಕೆರೆಕಟ್ಟೆಗಳಲ್ಲಿ ನೀರಿಲ್ಲ. ಇಷ್ಟಾದರೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.