ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತನ ತಲೆ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ನಂದಿನಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜ, ಸ್ಪಾಟ್ ನಾಗ, ಗೋಪಿ ಸೇರಿ ಆರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಮೇ 24 ರ ರಾತ್ರಿ 11 ಗಂಟೆಯ ಸುಮಾರಿಗೆ ಲಗ್ಗೆರೆ ಬಳಿಯ ಚೌಡೇಶ್ವರಿ ನಗರದ ಹಳ್ಳಿ ರುಚಿ ಹೊಟೇಲ್ ಮುಂಭಾಗದಲ್ಲಿ ಕೊಲೆ ನಡೆದಿತ್ತು. ರವಿ ಅಲಿಯಾಸ್ ಮತ್ತಿ ರವಿ (42) ಎಂಬಾತನನ್ನು ಹತ್ಯೆಗೈಯ್ಯಲಾಗಿತ್ತು.
ಸುಮ್ಮನೆ ಬಿಡುವುದಿಲ್ಲ ಎಂದಿದ್ದಕ್ಕೆ ನಡೆದಿತ್ತು ಹತ್ಯೆ:ವೃತ್ತಿಯಲ್ಲಿ ಟೆಂಪೋ ಟ್ರಾವೆಲ್ಲರ್ ಚಾಲಕ ಹಾಗೂ ಮೇಕೆ ಸಾಕಾಣಿಕೆದಾರನಾಗಿದ್ದ ರವಿ ಘಟನೆಯ ದಿನ ಸಂಜೆ ಕೆಲಸ ಮುಗಿಸಿ ಮನೆ ಹತ್ತಿರ ಬಂದಿದ್ದರು. ಸಿಎಂಎಚ್ ಬಾರ್ಗೆ ಬಂದು ಮದ್ಯ ಸೇವಿಸಿ ಕೃಷ್ಣ ಮೂರ್ತಿ ಎಂಬ ಮತ್ತೋರ್ವ ಕಾಂಗ್ರೆಸ್ ಮುಖಂಡನ ಬರ್ತ್ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿಯಲ್ಲಿ ರವಿ ಹಾಗೂ ಆರೋಪಿಗಳ ನಡುವೆ ಗಲಾಟೆ ನಡೆದಿದೆ. ಆರೋಪಿಗಳಾದ ಮಂಜ ಮತ್ತು ಸ್ಪಾಟ್ ನಾಗ ರವಿಗೆ ಬಲವಾಗಿ ಹೊಡೆದಿದ್ದಾರೆ. ಸಿಟ್ಟಿಗೆದ್ದ ರವಿ 'ನಿಮ್ಮನ್ನು ಬಿಡೋದಿಲ್ಲ' ಎಂದು ಬೆದರಿಕೆ ಹಾಕಿದ್ದರಂತೆ.
ರವಿಯನ್ನು ಬಿಟ್ಟರೆ ತಮಗೆ ಕಂಟಕ ಎಂದು ಭಾವಿಸಿದ್ದ ಆರೋಪಿಗಳು, ಆತ ಮನೆಗೆ ತೆರಳುವುದನ್ನೇ ಹೊಂಚು ಹಾಕಿ ಕಾದು ಕುಳಿತಿದ್ದರು. ಆ ಬಳಿಕ ಬೈಕುಗಳಲ್ಲಿ ಅಟ್ಟಾಡಿಸಿಕೊಂಡು ಬಂದು ಹಲ್ಲೆ ಮಾಡಿದ್ದರು. ಕೊನೆಗೆ ಹಳ್ಳಿರುಚಿ ಹೊಟೇಲ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆಯ ಮೇಲೆ ಸೈಜು ಗಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಂದಿನಿ ಲೇಔಟ್ ಠಾಣಾ ಪೊಲೀಸರು ಸದ್ಯ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.