ಬೆಂಗಳೂರು: ನನ್ನ ಜೀವನದಲ್ಲಿ ಹೊಸ ಸಂಸತ್ ಕಟ್ಟಡದಲ್ಲಿ ನಾನು ಕೂರುತ್ತೇನೆ ಎಂಬ ಯೋಚನೆಯನ್ನೇ ಮಾಡಿರಲಿಲ್ಲ. ಇದೊಂದು ಅಭೂತಪೂರ್ವ ಕ್ಷಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ನೂತನ ಸಂಸತ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿನ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನ್ನ ಅದೃಷ್ಟ. ನಾನು 1962 ರಲ್ಲಿ ಕರ್ನಾಟಕ ವಿಧಾನಸಭೆ ಪ್ರವೇಶಿಸಿದ್ದೆ. 1991ರಿಂದ ಸಂಸತ್ ಸದಸ್ಯನಾಗಿದ್ದೇನೆ. 32 ವರ್ಷದ ಮುಂಚೆ ನಾನು ಈ ಕಟ್ಟಡ ಪ್ರವೇಶಿಸುವಾಗ ಮುಂದೊಂದು ದಿನ ಪ್ರಧಾನ ಮಂತ್ರಿಯಾಗುತ್ತೇನೆ ಎಂದು ಊಹಿಸಿರಲಿಲ್ಲ. ಇಷ್ಟು ಸುದೀರ್ಘ ಕಾಲ ರಾಜಕೀಯ ಜೀವನದಲ್ಲಿ ಇರುತ್ತೇನೆ ಎಂಬುದೂ ಗೊತ್ತಿರಲಿಲ್ಲ. ಆದರೆ, ನನಗೇ ಅಚ್ಚರಿ ಎಂಬಂತೆ ನನ್ನ ಜೀವನದಲ್ಲಿ ಹೊಸ ಸಂಸತ್ ಕಟ್ಟಡದಲ್ಲಿ ನಾನು ಕೂರುತ್ತೇನೆ ಎಂಬ ಯೋಚನೆಯನ್ನೇ ಮಾಡಿರಲಿಲ್ಲ ಎಂದು ತಮ್ಮ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಭಾರತೀಯ ಸಂಪ್ರದಾಯದಲ್ಲಿ ಹೊಸ ಮನೆ ಕಟ್ಟುವುದು ಮತ್ತು ಹೊಸ ಮನೆ ಗೃಹ ಪ್ರವೇಶ ಮಾಡುವುದು ಅತ್ಯಂತ ಶುಭ ಹಾಗೂ ವಿಶೇಷ ದಿನವಾಗಿರುತ್ತದೆ. ಭಾರತ ವರ್ಷದಲ್ಲಿ ಇದೊಂದು ಅವಿಸ್ಮರಣೀಯ ದಿನ. ಹಳೆ ಸಂಸತ್ ಕಟ್ಟಡ ನಿರ್ಮಿಸುವಾಗ ನಾವು ಬ್ರಿಟೀಷರ ಆಡಳಿತದಲ್ಲಿದ್ದೆವು. ಆವಾಗ ಸ್ವಾತಂತ್ರ್ಯ ಆಸುಪಾಸಿನಲ್ಲಿದ್ದಿಲ್ಲ. ತಮ್ಮ ಆಡಳಿತಕ್ಕೆ ಸೂರ್ಯಾಸ್ತವೇ ಇಲ್ಲ ಎಂದು ಭಾವಿಸಿ ಬ್ರಿಟಿಷರು ದಿಲ್ಲಿಯಲ್ಲಿ ಅದ್ಭುತ ಸಂಸತ್ ಕಟ್ಟಡ ಕಟ್ಟಿದ್ದರು. ಆದರೆ, ಮಹಾತ್ಮಾ ಗಾಂಧಿ, ಪಂಡಿತ್ ನೆಹರು, ಸರ್ದಾರ್ ಪಟೇಲ್, ಡಾ.ಅಂಬೇಡ್ಕರ್, ಸುಭಾಶ್ ಚಂದ್ರ ಭೋಸ್, ಮೌಲಾನ ಆಜಾದ್ ಮುಂತಾದ ಹೋರಾಟಗಾರರು ನಮಗೆ ಸ್ವಾತಂತ್ರ್ಯದ ದಾರಿ ತೋರಿಸಿದರು ಎಂದು ಸ್ಮರಿಸಿದ್ದಾರೆ.
ನಮ್ಮ ದೇಶ, ಸಂಸತ್ಗೆ ರಕ್ತಪಾತ ಕ್ರಾಂತಿಯ ಕಪ್ಪುಚುಕ್ಕೆ ಇಲ್ಲ. ಅಹಿಂಸಾ ಮಾರ್ಗದಿಂದ ನಾವು ಸ್ವಾತಂತ್ರ್ಯ ಪಡೆದಿದ್ದೇವೆ. ಅದು ನಮ್ಮ ಬಳುವಳಿ. ಆ ಮೌಲ್ಯವನ್ನು ನಾವು ಕಾಪಾಡಿಕೊಂಡು, ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಸ್ವಾತಂತ್ರ್ಯ ನಂತರ ನಮ್ಮ ಸಂಸತ್ ಹಲವು ಏರು ಪೇರುಗಳನ್ನುಕಂಡಿದೆ. ಅದು ಅಹಂಕಾರ ಹಾಗೂ ಅಪಮಾನ, ಜಯ, ಸೋಲುಗಳನ್ನು ಕಂಡಿದೆ. ಒಟ್ಟಾಗಿ ಹೇಳುವುದಾದರೆ ಸಂಸತ್ ಕಟ್ಟಡ ಸಮಲೋಲನ ಕಾಯ್ದುಕೊಳ್ಳಲು ಯತ್ನಿಸಿದ್ದು, ದೇಶದ ಜನರ ಆಕಾಂಕ್ಷಿಗಳನ್ನು ಈಡೇರಿಸಲು ಶ್ರಮಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಸತ್ ಎಲ್ಲ ರೀತಿಯ ಅಭಿಪ್ರಾಯ, ಜಾತಿ, ವಿಭಿನ್ನತೆ, ಧರ್ಮ, ಭಾಷೆ ಹಾಗೂ ಭೌಗೋಳಿಕವನ್ನು ಮೈಗೂಡಿಸಿಕೊಂಡಿದೆ. ಇದು ಅನೇಕತೆಯನ್ನು ಸಂಭ್ರಮಿಸಿದೆ. ಈ ದೇಶದ ಅಪಾರ ವಿಭಿನ್ನತೆಯನ್ನು ಈ ಹೊಸ ಪ್ರಜಾಪ್ರಭುತ್ವದ ಮನೆಯಲ್ಲಿ ಕಾಪಾಡುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೇಶದ ಜನರು ಯಾವತ್ತೂ ಬುದ್ಧಿವಂತರಾಗಿದ್ದಾರೆ. ಯಾರಾದರೂ ಈ ಸಮಗ್ರತೆಗೆ ಚ್ಯುತಿ ತರಲು ಮುಂದಾದರೆ ಅವರನ್ನು ಈ ಸಂಸತ್ನಿಂದ ಮೌನವಾಗಿ ಹೊರ ಹಾಕುತ್ತಾರೆ. ದೇಶದ ಜನರು ಜನಪ್ರತಿನಿಧಿಗಳಿಗೆ ಅತಿ ಕಠಿಣ ಪಾಠವನ್ನು ಆಗಾಗ ಕಲಿಸಿಕೊಡುತ್ತಿರುತ್ತಾರೆ. ಹೊಸ ಸಂಸತ್ ಕಟ್ಟಡ ಉದ್ಘಾಟನೆಯ ಈ ಸಂದರ್ಭ ನಾನು ದೇಶದ ಜನರಿಗೆ ನಮಸ್ಕರಿಸುತ್ತೇನೆ. ನನ್ನ ಶ್ರೀಮಂತ ಪ್ರಜಾಪ್ರಭುತ್ವದ ಪರಂಪರೆ ಮುಂದುವರಿಯಲಿ ಹಾಗೂ ಇನ್ನಷ್ಟು ಪ್ರಜ್ವಲಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ದೇವೇಗೌಡರನ್ನು ಭೇಟಿಯಾದ ಸುಮಲತಾ:ಹೊಸ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಹೆಚ್.ಡಿ.ದೇವೇಗೌಡ ಅವರನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಭೇಟಿ ಮಾಡಿದರು. ಈ ಕುರಿತು ಅವರು ಟ್ವೀಟ್ ಮಾಡಿದ್ದು, ಇಂದು ನಡೆದ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ನೂತನ ಸಂಸತ್ ಕಟ್ಟಡವನ್ನು ಪ್ರವೇಶ ಮಾಡಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದೆ. ಹಿರಿಯರ ಜೊತೆ ಕಳೆದ ಆ ಕ್ಷಣ ಸದಾ ನೆನಪಿಡುವಂಥದ್ದು ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಹೊಸ ಸಂಸತ್ ಭವನ ನವ ಭಾರತದ ಭರವಸೆಯ ಪ್ರತಿಬಿಂಬ: ಪ್ರಧಾನಿ ಮೋದಿ