ಬೆಂಗಳೂರು: ರಾಷ್ಟಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಸಿಡಿ ಪ್ರಕರಣದಲ್ಲಿ ಶಾಮೀಲಾಗಿ ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಎಸ್ಐಟಿ ಅಧಿಕಾರಿಗಳು ತೀವ್ರ ಶೋಧ ಮುಂದುವರಿಸಿದ್ದಾರೆ. ಪ್ರಕರಣದ ಶಂಕಿತರು ಭೋಪಾಲ್ ನಲ್ಲಿರುವ ಮಾಹಿತಿ ಎಸ್ಐಟಿಗೆ ದೊರೆತಿದೆ.
ಪ್ರಕರಣದ ಆರೋಪಿಗಳ ಹುಡುಕಾಟಕ್ಕೆ ಈಗಾಗಲೇ 4 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಶಂಕಿತರು ದಿನಕ್ಕೊಂದು ಪ್ರದೇಶದಲ್ಲಿ ಓಡಾಡಿ ಸಿನಿಮೀಯ ಶೈಲಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಸುಳಿವಿನ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಬೀಡು ಬಿಟ್ಟಿರುವ ಎಸ್ಐಟಿ ತಂಡ ಶೋಧ ಕಾರ್ಯ ಮುಂದುವರೆಸಿದೆ. 4 ತಂಡಗಳಿಗೂ ಒಂದೊಂದು ಹೊಣೆ ನೀಡಲಾಗಿದ್ದು, ಒಂದು ತಂಡ ತಾಂತ್ರಿಕ ಕಾರ್ಯಾಚರಣೆ ನಡೆಸುತ್ತಿದ್ದರೆ, ಇನ್ನೊಂದು ತಂಡದ ಆರೋಪಿಗಳು ಓಡಾಡುತ್ತಿರುವ ಸ್ಥಳ ಪತ್ತೆ ಹಚ್ಚಲು ಹಲವು ರಾಜ್ಯಗಳನ್ನು ಸುತ್ತುತ್ತಿದೆ. ಇನ್ನೆರಡು ತಂಡಗಳು ಜಪ್ತಿ ಮಾಡಿದ ದಾಖಲೆ ಕಲೆ ಹಾಕೋ ಕೆಲಸ ಹಾಗೂ ಸಾಕ್ಷಿ ಸಂಗ್ರಹಿಸುವುದರಲ್ಲಿ ನಿರತವಾಗಿವೆ.