ಬೆಂಗಳೂರು:ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಿದ ಪ್ರಕರಣದ ವಿರುದ್ಧ ಎಸ್ಐಟಿ ಮೂಲಕ ಸಮಗ್ರ ತನಿಖೆ ನಡೆಸಿ, ಭೂ ಕಬಳಿಕೆದಾರರು ಹಾಗೂ ಅಧಿಕಾರಿಗಳ ನಡುವಿನ ಜಾಲವನ್ನು ಭೇದಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸಭೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿದ ನಿಯಮ 69ರಡಿ ಸರ್ಕಾರಿ ಜಮೀನು ಕಬಳಿಕೆ ಮೇಲಿನ ಅಲ್ಪ ಕಾಲಾವಧಿ ಚರ್ಚೆಗೆ ಉತ್ತರಿಸಿದ ಸಿಎಂ, ಎ.ಟಿ.ರಾಮಸ್ವಾಮಿ ಸಂಪೂರ್ಣ ಪ್ರಾಮಾಣಿಕತೆ, ನಿಷ್ಠೆಯಿಂದ ಭೂಗಳ್ಳರ ಮಟ್ಟಹಾಕಲು ಪಣ ತೊಟ್ಟಿದ್ದಾರೆ. ಅವರಿಗೆ ಈ ಸದನದಲ್ಲಿ ಅಭಿನಂದನೆ ಹೇಳುತ್ತೇನೆ. ಭೂಮಿ ಬೆಲೆ ಹೆಚ್ಚಾದಾಗಿಂದ ನಕಲಿ ದಾಖಲೆಗಳ ಸೃಷ್ಟಿ ಹೆಚ್ಚಳವಾಗಿದೆ. ಹಲವು ಪ್ರಕರಣಗಳು ದಾಖಲಾಗಿವೆ.
ಕೇಸ್ ದಾಖಲಾದರೂ ಕೋರ್ಟ್ನಿಂದ ಆದೇಶ ತರುತ್ತಾರೆ. ಅಧಿಕಾರಿಗಳ ಮೇಲೆ ನಾವು ನಂಬಿಕೆ ಇಟ್ಟಿರುತ್ತೇವೆ. ಆದರೆ ಭೂಗಳ್ಳರು ಕೋರ್ಟ್ ನಿಂದ ಆದೇಶ ತರುತ್ತಾರೆ. ಅಧಿಕಾರಿಗಳು ಕೋರ್ಟ್ ಆದೇಶದಂತೆ ನಡೆದುಕೊಂಡಿದ್ದೇವೆ ಎನ್ನುತ್ತಾರೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಕೆಲ ಅಧಿಕಾರಿಗಳೂ ಕೂಡ ಶಾಮೀಲಾಗಿದ್ದಾರೆ. ಅಧಿಕಾರಿಗಳು ಆಸೆ, ಆಮಿಷಗಳಿಗೆ ಬಲಿಯಾಗುತ್ತಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಈ ಪ್ರಕರಣಗಳು ಜಾಸ್ತಿಯಾಗಿದೆ ಎಂದು ಒಪ್ಪಿಕೊಂಡರು.