ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದೆಲ್ಲೆಡೆ ನೀತಿ ಸಂಹಿತೆ ಜಾರಿಯಿರುವುದರಿಂದ ಗಣ್ಯರ ಕಾರುಗಳ ಮುಂಗಾವಲು ಹಾಗೂ ಬೆಂಗಾವಲು ವಾಹನಗಳಿಗೆ ಟಾಪ್ ಲೈಟ್ ಹಾಗೂ ಸೈರನ್ ಬಳಸದಂತೆ ತಮ್ಮ ಸಿಬ್ಬಂದಿಗೆ ನಗರ ಸಿಎಆರ್ ಕೇಂದ್ರ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ ಆದೇಶ ಹೊರಡಿಸಿದ್ದಾರೆ.
ಚುನಾವಣೆ ಕಾರಣದಿಂದಾಗಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆ ಓಡಾಡುವ ವಿವಿಧ ಗಣ್ಯರ ಮುಂಗಾವಲು ಹಾಗೂ ಬೆಂಗಾವಲು ವಾಹನಗಳಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುವವರು ಟಾಪ್ ಲೈಟ್ ಹಾಗೂ ಸೈರನ್ ಶಬ್ಧ ಬಳಸಕೂಡದು. ಚುನಾವಣೆ ನಿಯಮದನ್ವಯ ಸೈರನ್ ಬಳಸದಂತೆ ಸೂಚಿಸಿದೆ. ಚುನಾವಣೆ ಮುಗಿಯುವವರೆಗೂ ಚಾಲಕ ಅಥವಾ ಅಧಿಕಾರಿಗಳಾಗಲಿ ಸೈರನ್ ಬಳಸುವಂತಿಲ್ಲ. ಒಂದು ವೇಳೆ ಚುನಾವಣಾ ನಿಯಮ ಉಲ್ಲಂಘಿಸಿದರೆ ಅಂತಹ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ರಂಗೇರಿದ್ದು ಪಕ್ಷಗಳು, ಸ್ಪರ್ಧಾ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದಾರೆ. ಮೇ 10 ರಂದು ರಾಜ್ಯಾದಂತ ಮತದಾನ ನಡೆಯಲಿದ್ದು, ರಾಜ್ಯದ ಜನತೆ ತಮ್ಮ ಹಕ್ಕನ್ನು ಚಲಾಯಿಸಲು ಕೇವಲ 13 ದಿನ ಬಾಕಿ ಇದೆ. ಇನ್ನು ಮೇ 13 ರಂದು ಮತದಾನದ ಫಲಿತಾಂಶ ಹೊರಬೀಳಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯುವುದಕ್ಕಾಗಿ ಮತದಾರರನ್ನು ಸೆಳೆಯುವಲ್ಲಿ ನಿರತರಾಗಿವೆ.
ಇದನ್ನೂ ಓದಿ: ಚುನಾವಣಾ ಅಖಾಡದಲ್ಲಿ ಸ್ಟಾರ್ ಕ್ಯಾಂಪೇನರ್ಸ್: ತಾರಾ ಪ್ರಚಾರಕರಿಗಿರುವ ಪ್ರಾಮುಖ್ಯತೆ, ಷರತ್ತು ನಿಬಂಧನೆಗಳೇನು?
ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲಾ ಕಡೆ ಕಟ್ಟು ನಿಟ್ಟಾದ ನಿಯಮಗಳನ್ನು ಹೇರಲಾಗಿದೆ. ಚುನಾವಣಾ ಚೆಕ್ಪೋಸ್ಟ್ನಿಂದ ಹಿಡಿದು ಸಾರ್ವಜನಿಕ ಸ್ಥಳದಲ್ಲಿರುವ ಪಕ್ಷವನ್ನು ಬಿಂಬಿಸುವಂಥಹ ಚಿಹ್ನೆಗಳಿಗು ನಿರ್ಬಂಧ ಹೇರಲಾಗಿದೆ. ಚುನಾವಣಾ ಆಯೋಗ ಚುರುಕಾಗಿದ್ದು, ಇಲ್ಲಿವರೆಗೆ ಕೋಟಿಗಟ್ಟಲೆ ಅಕ್ರಮ ನಗದು ಹಣ, ಮದ್ಯ, ಮಾದಕ ದ್ರವ್ಯ, ಬೆಲೆ ಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳು, ಬಟ್ಟೆಗಳನ್ನು ವಶಪಡಿಸಿಕೊಂಡಿದೆ.
ಜಾಹೀರಾತು ಮೇಲೂ ನಿಗಾವಹಿಸಿರುವ ಚುನಾವಣಾ ವಿಭಾಗ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ದೃಶ್ಯ ಮಾಧ್ಯಮ, ರೇಡಿಯೋ, ಸಾಮಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಬೇಕಾದರೇ ಮಾಧ್ಯಮ ಪ್ರಮಾಣೀಕರಣ ಮತ್ತು ಪರೀಶೀಲನಾ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕೆಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಸೂಚಿಸಿದ್ದರು. ದೃಶ್ಯ ಮಾಧ್ಯಮ, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳ ಮೇಲೆ ನಿಗಾ ವಹಿಸಲು 3 ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೂರ್ವಾನುಮತಿ ಪಡೆಯದೇ ನಿಯವನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಅಭ್ಯರ್ಥಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆಯೂ ನೀಡಿದ್ದಾರೆ.
ಇದನ್ನೂ ಓದಿ:ಬಿಜೆಪಿಯಲ್ಲಿ ಮಾತ್ರ ಲಿಂಗಾಯತರು ಮಂದೆಯೂ ಮುಖ್ಯಮಂತ್ರಿಯಾಗುತ್ತಾರೆ: ನಳಿನ್ ಕುಮಾರ್ ಕಟೀಲ್