ಬೆಂಗಳೂರು:ರಾಜ್ಯ ಕಾಂಗ್ರೆಸ್ ನಾಯಕರು ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ರೂಪುರೇಷೆ ಹೆಣೆಯುವ ಚರ್ಚೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಸಿಂದಗಿ ವಿಧಾನಸಭೆ ಕ್ಷೇತ್ರದ ಮರುಚುನಾವಣೆ ಸಂಬಂಧ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು. ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ್ ಮತ್ತಿತರರು ಹಾಜರಿದ್ದರು.
ಗೆಲುವಿನ ಕುರಿತು ಮುಖಂಡರೊಂದಿಗೆ ಡಿಕೆಶಿ ಚರ್ಚೆ ಈಗಾಗಲೇ ಎರಡು ವಿಧಾನಸಭೆ ಕ್ಷೇತ್ರಗಳು ಹಾಗೂ ಒಂದು ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಏಪ್ರಿಲ್ 17ರಂದು ಮತದಾನ ನಡೆಯಲಿದೆ. ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರವನ್ನು ಮರಳಿ ಕೈವಶ ಮಾಡಿಕೊಳ್ಳುವ ಜೊತೆಗೆ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಸಹ ಗೆದ್ದುಕೊಳ್ಳಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಈ ಮಧ್ಯೆ ಮಾಜಿ ಸಚಿವ ಮನಗೂಳಿ ನಿಧನದಿಂದ ತೆರವಾಗಿರುವ ಸಿಂದಗಿ ಕ್ಷೇತ್ರದಿಂದಲೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿರುವ ಕಾಂಗ್ರೆಸ್ ಪಕ್ಷ ಮಾಜಿ ಸಚಿವರ ಪುತ್ರ ಅಶೋಕ್ ಮನಗೂಳಿ ಅವರನ್ನು ಜೆಡಿಎಸ್ನಿಂದ ಸೆಳೆದುಕೊಂಡಿದೆ. ಇವರನ್ನೇ ಉಪಚುನಾವಣೆ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನವೇ ಪಕ್ಷದ ಹೈಕಮಾಂಡ್ ಅಶೋಕ್ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದೆ. ಅಭ್ಯರ್ಥಿ ಹುಡುಕಾಟದ ಸಮಸ್ಯೆ ಇಲ್ಲದ ಹಿನ್ನೆಲೆಯಲ್ಲಿ ಗೆಲ್ಲುವ ರೂಪುರೇಷೆ ಹೆಣೆಯಲು ಡಿಕೆಶಿ ಪಕ್ಷದ ನಾಯಕರ ಜೊತೆ ಚರ್ಚಿಸಿದ್ದಾರೆ. ಘೋಷಣೆಯಾಗಿರುವ ಮೂರು ಕ್ಷೇತ್ರಗಳ ಜೊತೆ ಸಿಂದಗಿ ಕ್ಷೇತ್ರದಲ್ಲೂ ಗೆಲುವು ಸಾಧಿಸುವ ಮೂಲಕ ಆಡಳಿತ ಪಕ್ಷ ಬಿಜೆಪಿಗೆ ಮುಖಭಂಗ ಉಂಟುಮಾಡುವ ಸಿದ್ಧತೆಯನ್ನು ಕಾಂಗ್ರೆಸ್ ನಾಯಕರು ಕೈಗೊಂಡಿದ್ದಾರೆ.
ಏಪ್ರಿಲ್ 17ರಂದು ನಡೆಯುವ ಮೂರು ಕ್ಷೇತ್ರಗಳ ಚುನಾವಣೆ ಗೆಲುವಿನ ರೂಪುರೇಷೆ ಹೆಣೆಯಲು ಮತ್ತು ನಾಯಕರ ನಡುವೆ ಒಗ್ಗಟ್ಟು ಮೂಡಿಸಲು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಮಧ್ಯಾಹ್ನ ಔತಣ ಕೂಟ ಆಯೋಜಿಸಿದ್ದು, ಅಲ್ಲಿಯೂ ಉಪಚುನಾವಣೆ ಗೆಲುವಿನ ಸಂಬಂಧ ಸುದೀರ್ಘ ಮಾತುಕತೆ ನಡೆಯಲಿದೆ.