ಬೆಂಗಳೂರು :ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಎರಡೂ ಕ್ಷೇತ್ರಗಳಲ್ಲಿ ಮೂರು ಪಕ್ಷಗಳು ಭಾರೀ ಪ್ರಚಾರ ನಡೆಸಿದ್ದವು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರ ರಾಜಕೀಯ ನಾಯಕರು ಬೃಹತ್ ರೋಡ್ ಶೋ ನಡೆಸಿ ಜನರಲ್ಲಿ ಹಲವು ಆಶ್ವಾಸನೆಗಳನ್ನು ನೀಡಿ ಪಕ್ಷದ ಗೆಲುವಿಗೆ ಕಾರಣರಾಗಬೇಕು ಎಂದು ಮತದಾರನ ಮನಗೆಲ್ಲಲು ಅಂತಿಮ ಕ್ಷಣದ ಕಸರತ್ತು ನಡೆಸಿದರು.
ಬೆಳಗ್ಗೆಯಿಂದ ಸಂಜೆವರೆಗೆ ಸಿಎಂ ಪ್ರಚಾರ :ಹಾನಗಲ್ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಮೂರು ಪಕ್ಷಗಳ ಅಭ್ಯರ್ಥಿಗಳು, ಪಕ್ಷದ ನಾಯಕರು ಅಬ್ಬರದ ಪ್ರಚಾರ ನಡೆಸಿದರು. ಸಿಎಂ ಬೊಮ್ಮಾಯಿಯವರಂತೂ ಮುಂಜಾನೆಯಿಂದ ಸಂಜೆಯವರೆಗೆ ಮಾಸನಕಟ್ಟಿ,ಕೂಡಲ ನರೇಗಲ್, ಕಾಡಶೆಟ್ಟಿಹಳ್ಳಿ ಮತ್ತು ಬೊಮ್ಮನಹಳ್ಳಿಯಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು.
ರೋಡ್ ಶೋ ನಡೆಸಿದ ಬಿಎಸ್ವೈ :ಹಾನಗಲ್‌ನಲ್ಲಿ ನಡೆದ ಬಹಿರಂಗ ಪ್ರಚಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರು ನಗರಾದ್ಯಂತ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಮತಯಾಚಿಸಿದರು. ಇದರ ಜೊತೆಗೆ ಕ್ಷೇತ್ರದ ವಿವಿಧೆಡೆ ನಟಿ ಶೃತಿಯವರು ಕೂಡ ಅಭ್ಯರ್ಥಿ ಪರ ಮತಯಾಚಿಸಿದರು.