ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಉಗ್ರರ ಜಾಡು, ಜಿಹಾದಿಗಳು, ಹಾಗೆ ಮಂಗಳೂರಿನ ಬಾಂಬ್ ರೂವಾರಿ ಪತ್ತೆಯಾದ ಕಾರಣ ಸಿಲಿಕಾನ್ ಸಿಟಿ ಪೊಲೀಸರು ಸಂಪೂರ್ಣವಾಗಿ ಅಲರ್ಟ್ ಆಗಿದ್ದಾರೆ. ಯಾಕಂದ್ರೆ ಕೇವಲ ನಾಲ್ಕೇ ದಿನಗಳಲ್ಲಿ ಗಣರಾಜ್ಯೋತ್ಸವ ಇರುವ ಕಾರಣ ಪೊಲೀಸರು ಹದ್ದಿನ ಕಣ್ಣಿಡಬೇಕಿದೆ.
ಈಗಾಗಲೇ ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ವಿಧ್ವಸಂಕ ಕೃತ್ಯವೆಸಗಲು ಬಹಳಷ್ಟು ಮಂದಿ ಆ್ಯಕ್ಟಿವ್ ಆಗಿರುವ ವಿಚಾರ ತಿಳಿದು ಬಂದಿದೆ. ಹೀಗಾಗಿ ನಗರದಲ್ಲಿ ಪ್ರಮುಖವಾಗಿ ವಿಧಾನಸೌಧ, ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಇತ್ತೀಚಿಗೆ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ ಹೊಸ ನಿಯಮ ಜಾರಿಗೆ ತಂದ ಮೇಲೆ, ಕೆಲವರು ಆಕ್ರೋಶ ಹೊರ ಹಾಕ್ತಿದ್ದಾರೆ. ಅಲ್ಲದೆ, ಆರ್ಎಸ್ಎಸ್ ಹಾಗೂ ಹಿಂದೂ ಮುಂಖಡರು ಕೂಡ ಇವರ ಟಾರ್ಗೆಟ್ ಆಗಿದ್ದಾರೆ ಎಂಬ ಸಂಶಯಗಳು ವ್ಯಕ್ತವಾಗಿವೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆಯಬಹುದು ಅನ್ನೋ ಗುಮಾನಿ ವ್ಯಕ್ತವಾಗಿದ್ದು, ಹಿಗಾಗಿ ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಖಾಕಿ ಹಾಗೂ ಭದ್ರತಾ ಪಡೆಗಳು ಮಫ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಇನ್ನು, ಗಣರಾಜ್ಯೋತ್ಸವವು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿದ್ದು, ಈಗಾಗ್ಲೇ ಕೆಲವೆಡೆ ಅನುಮಾನಾಸ್ಪದ ಬ್ಯಾಗ್ಗಳು ಪತ್ತೆಯಾಗ್ತಿರುವ ಕಾರಣ ಈಗಿಂದಲೇ ಪೊಲೀಸರು ಪರೇಡ್ ಮೈದಾನ ಸುತ್ತ ಸರ್ಪಗಾವಲು ಹಾಕಿದ್ದಾರೆ. ಮಾಣಿಕ್ ಷಾ ಮೈದಾನ ಪ್ರವೇಶಿಸುವ ಪ್ರತಿಯೊಬ್ಬರನ್ನು ಪರಿಶೀಲನೆ ಮಾಡಿ ಮೈದಾನದ ಒಳಗೆ ಬಿಡಲು ಪೊಲೀಸರು ನಿರ್ಧರಿಸಿದ್ದಾರೆ. ಎಲ್ಲೋ ಒಂದು ಕಡೆ ಏನಾದ್ರು ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇದ್ದು, ಇದನ್ನ ಸಂಪೂರ್ಣವಾಗಿ ಮಟ್ಟ ಹಾಕಲು ಖಾಕಿ ಪಡೆ ಕೂಡ ಸಿದ್ಧವಾಗಿದೆ.