ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಸೈಲೆಂಟ್ ಸುನೀಲ್ ಬೆಂಬಲಿಗರು ಬೆಂಗಳೂರು:ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಸೈಲೆಂಟ್ ಸುನೀಲ್ ಬೆಂಬಲಿಗರು ರಾಜ್ಯ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿ ಒಳಗಡೆಯೇ ಧರಣಿ ನಡೆಸಿದ್ದರಿಂದ ಕೆಲ ಕಾಲ ಹೈಡ್ರಾಮಾ ನಡೆಯಿತು. ಪ್ರತಿಭಟನಾನಿರತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಹೈಕಮಾಂಡ್ ಗಮನಕ್ಕೆ ವಿಷಯ ತರುವ ಭರವಸೆ ನೀಡಿ ಪರಿಸ್ಥಿತಿ ನಿಯಂತ್ರಿಸಿದರು.
ಬಿಜೆಪಿ ಕಚೇರಿಗೆ ಮುತ್ತಿಗೆ:ಚಾಮರಾಜಪೇಟೆಯಿಂದ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ಗೆ ಟಿಕೆಟ್ ಕೊಟ್ಟಿದ್ದಕ್ಕೆ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಸೈಲೆಂಟ್ ಸುನೀಲ್ ಬೆಂಬಲಿತ ನೂರಾರು ಕಾರ್ಯಕರ್ತರು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದರು. ಕಚೇರಿಯ ಮೊದಲ ಮಹಡಿಗೆ ನುಗ್ಗಿ ಧಿಕ್ಕಾರ ಕೂಗುತ್ತಾ ಭಾಸ್ಕರ್ ರಾವ್ ವಿರುದ್ಧ ಘೋಷಣೆ ಮೊಳಗಿಸಿದರು. ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡುವಂತೆ ಆಗ್ರಹಿಸಿ ಕಚೇರಿಯೊಳಗೆ ಮಲಗಿ ಧರಣಿ ನಡೆಸಿದರು.
ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಪ್ರಯತ್ನಿಸಿದರಾದರೂ ಪೊಲೀಸರ ಮಾತಿಗೆ ಒಪ್ಪದ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷರು ಬರಲೇಬೇಕೆಂದು ಪಟ್ಟು ಹಿಡಿದು ಕುಳಿತರು. ಇನ್ನೊಂದೆಡೆ ಚಾಮರಾಜಪೇಟೆ ಮಹಿಳಾ ಕಾರ್ಯಕರ್ತರಿಂದಲೂ ಪ್ರತಿಭಟನೆ ನಡೆಯಿತು. ಕಚೇರಿಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತೆಯರನ್ನು ಪೊಲೀಸರು ತಡೆದರು. ಆದರೆ ಒಳಗಡೆ ಇದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿ ಮೂಖ ಪ್ರೇಕ್ಷಕರಾದರು.
ರವಿಕುಮಾರ್ ಜತೆ ಚರ್ಚೆ: ಕಚೇರಿಯೊಳಗೆ ಪ್ರತಿಭಟನೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರ ನೆರವಿನೊಂದಿಗೆ ಮುತ್ತಿಗೆ ಹಾಕಿದವರನ್ನು ಹೊರ ಕಳಿಸಿದ ಬಿಜೆಪಿ ಸಿಬ್ಬಂದಿ ವಿರುದ್ಧವೂ ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು. ನಾವು ಪಕ್ಷದ ಕಾರ್ಯಕರ್ತರು, ಹೊರಗೆ ಯಾಕೆ ಹೋಗಬೇಕು ಅಂತ ವಾಗ್ವಾದ ನಡೆಸಿದರು. ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಪೊಲೀಸರ ಮಾತು ಕೇಳದೇ ಪ್ರತಿಭಟನೆ ಮುಂದುವರೆಸಿದರು. ಇಷ್ಟಾದರೂ ಕಚೇರಿಯಲ್ಲೇ ಇದ್ದರೂ ರಾಜ್ಯಾಧ್ಯಕ್ಷ ಕಟೀಲ್ ಮಾತುಕತೆಗೆ ಮುಂದಾಗಲಿಲ್ಲ. ಪ್ರತಿಭಟನೆ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವೇ ನಾಯಕರು ಬನ್ನಿ ಚರ್ಚೆ ಮಾಡೋಣ ಅಂತ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಭಟನಾನಿರತರಿಗೆ ಆಹ್ವಾನ ನೀಡಿದರು. ಈ ಆಹ್ವಾನ ಒಪ್ಪಿದ ಕೆಲ ಮುಖಂಡರು ಪಕ್ಷದ ಕಚೇರಿಯೊಳಗೆ ತೆರಳಿ ರವಿಕುಮಾರ್ ಜೊತೆ ಚರ್ಚಿಸಿದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಚಾಮರಾಜಪೇಟೆ ಅಭ್ಯರ್ಥಿ ಭಾಸ್ಕರ್ರಾವ್ ಬದಲಾವಣೆ ಮಾಡುವಂತೆ ಹೇಳಿದ್ದಾರೆ. ಮಂಡಲ ಅಧ್ಯಕ್ಷರು ಹಾಗೂ ಚಾಮರಾಜಪೇಟೆ ಕಾರ್ಯಕರ್ತರಿಗೆ ಮನವಿ ಮಾಡುತ್ತಿದ್ದೇನೆ. ನಿಮ್ಮ ಹಾಗೇ ನಾನೂ ಕಾರ್ಯಕರ್ತ. ನಿಮ್ಮ ಬೇಡಿಕೆ ಬಗ್ಗೆ ಬರೆದುಕೊಡಿ. ನಿಮ್ಮ ಪ್ರತಿನಿಧಿಯಾಗಿ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ಮಾಡುತ್ತೇನೆ. ಕೇಂದ್ರಕ್ಕೆ ಕಳಿಸಿಕೊಡ್ತೀನಿ. ಚಾಮರಾಜಪೇಟೆ ಸದ್ಯದ ಪರಿಸ್ಥಿತಿ ಏನು ಅಂತ ವರದಿ ಕಳಿಸುತ್ತೇವೆ. ನಮ್ಮ ಕಾರ್ಯಕರ್ತರಾಗಿರೋದ್ರಿಂದ ನ್ಯಾಯ ಕೊಡಿಸಲೇಬೇಕಿದೆ. ಚಾಮರಾಜಪೇಟೆಯಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸೋಣ ಎಂದು ಕರೆ ನೀಡಿದರು.
ಸಭೆ ನಂತರ ಮಾತನಾಡಿದ ಮಂಡಲ ಅಧ್ಯಕ್ಷ ಕೇಶವ್, ನಿನ್ನೆ ಪಟ್ಟಿ ಬಿಡುಗಡೆ ಆಗಿದೆ. ಭಾಸ್ಕರ್ ರಾವ್ ಅವರನ್ನ ಆಯ್ಕೆ ಮಾಡಲಾಗಿದೆ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಬಿಜೆಪಿ ಪಕ್ಷದ ಬಾವುಟ ಹಾರಿಸಬೇಕು ಅಂತ ತೀರ್ಮಾನ ಮಾಡಿದ್ದೇವೆ. ನಿನ್ನೆಯ ಪಟ್ಟಿಯಲ್ಲಿ ಬಂದಿರುವ ಭಾಸ್ಕರ್ ರಾವ್ ಹೆಸರು ಕೋರ್ ಕಮಿಟಿಯಿಂದ ಹೋಗಿರಲಿಲ್ಲ. ಆದರೂ ಅವರಿಗೆ ಟಿಕೆಟ್ ನೀಡಲಾಗಿದೆ. ಸುನೀಲ್ ಕುಮಾರ್ಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದೇವೆ. ಈ ಪತ್ರವನ್ನ ನಾವು ರಾಷ್ಟ್ರೀಯ ಮುಖಂಡರಿಗೆ ತಲುಪಿಸುತ್ತೇವೆ ಎಂದು ರವಿಕುಮಾರ್ ಹೇಳಿದ್ದಾರೆ. ಹೀಗಾಗಿ ಸದ್ಯಕ್ಕೆ ನಾವು ಅವರ ಭರವಸೆ ಮೆರೆಗೆ ವಾಪಸ್ ಹೋಗುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ ನಿಷೇಧ: ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ