ಬೆಂಗಳೂರು:ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನಾಳೆಯೂ ವಿಚಾರಣೆಗೆ ಕರೆದಿರುವ ಹಿನ್ನೆಲೆ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಾಳೆ 'ಮೌನ ಸತ್ಯಾಗ್ರಹ' ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.
ಜಿಲ್ಲಾ ಮುಖಂಡರು, ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಮುಂಚೂಣಿ ಘಟಕಗಳ ಜಿಲ್ಲಾ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.
ಸೋನಿಯಾ ಗಾಂಧಿ ಅವರಿಗೆ ವಿಚಾರಣೆ ನೆಪದಲ್ಲಿ ನೀಡಲಾಗುತ್ತಿರುವ ಕಿರುಕುಳ ನಿಲ್ಲುವವರೆಗೂ ಶಾಂತಿಯುತ ಪ್ರತಿಭಟನೆ ಮುಂದುವರಿಸಬೇಕು ಎಂದು ನಿರ್ದೇಶನ ನೀಡಿರುವುದಾಗಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯು ನಗರದಲ್ಲಿ ಮೌನ ಪ್ರತಿಭಟನೆ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಇ.ಡಿ. ವಿಚಾರಣೆಯನ್ನು ಅನಗತ್ಯವಾಗಿ ಮುಂದುವರೆಸಿ ಕಿರುಕುಳ ನೀಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರದೇಶ ಕಾಂಗ್ರೆಸ್ ಸಮಿತಿ ನಾಳೆಯೂ ನಗರದಲ್ಲಿ ಮೌನ ಪ್ರತಿಭಟನೆ ಮೂಲಕ ಖಂಡಿಸಲು ತೀರ್ಮಾನಿಸಿದೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಆನಂದ್ ರಾವ್ ವೃತ್ತದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಎದುರು ಮೌನ ಸತ್ಯಾಗ್ರಹ ಮುಂದುವರೆಯಲಿದೆ.