ಬೆಂಗಳೂರು: ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿಯಿಂದ ಮೊದಲ್ಗೊಂಡು ಮಾಧ್ಯಮ ಸಂಚಾಲಕ ಸೇರಿದಂತೆ ಭದ್ರತಾ ಸಿಬ್ಬಂದಿವರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದವರಿಗೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೋಕ್ ನೀಡಿದ್ದು ಇದೀಗ ಪ್ರಧಾನ ಕಾರ್ಯದರ್ಶಿಗೂ ಬಿಸಿ ಮುಟ್ಟಿಸಲು ಟೀಂ ಸಂತೋಷ್ ಬಣ ಮುಂದಾಗಿದೆ.
ಸದ್ಯ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ರವಿಕುಮಾರ್ಗೆ ಬಿಜೆಪಿ ಕಚೇರಿಯಿಂದ ಗೇಟ್ ಪಾಸ್ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಹಬ್ಬಿದೆ. ವಿಧಾನ ಪರಿಷತ್ ಸದಸ್ಯರೂ ಆಗಿರುವ ರವಿಕುಮಾರ್ ಬಿಜೆಪಿಯ ಪೂರ್ಣಾವಧಿ ಕಾರ್ಯಕರ್ತ. ಎಬಿವಿಪಿಯಿಂದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು ಸಂಘದ ಕಡೆಯಿಂದಲೇ ಪಕ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಪಕ್ಷದಲ್ಲಿಯೂ ಪೂರ್ಣಾವಧಿ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದಾರೆ.
ಸಂಘದಿಂದ ಪಕ್ಷಕ್ಕೆ ಬಂದು ಮಹತ್ವದ ಜವಾಬ್ದಾರಿ ನಿರ್ವಹಣೆ ಮಾಡುವವರಿಗೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದ ನಾಲ್ಕನೇ ಮಹಡಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಪಕ್ಷದ ಕಚೇರಿಯಲ್ಲೇ ವಾಸ್ತವ್ಯಕ್ಕೆ ಅವಕಾಶವಿದೆ. ಅವರಿಗಾಗಿಯೇ ಕೊಠಡಿಗಳನ್ನು ನೀಡಲಾಗಿದ್ದು ಅದರಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ಗೂ ಕೊಠಡಿ ನೀಡಲಾಗಿದೆ. ರವಿಕುಮಾರ್ ಸದ್ಯ ಬಿಜೆಪಿ ಕಚೇರಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.
ಆದರೆ, ಬಿಜೆಪಿಯಲ್ಲಿ ನಡೆಯುತ್ತಿರುವ ಬಿಎಸ್ವೈ ಮತ್ತು ಕಟೀಲ್ ಬಣದ ನಡುವಿನ ತಿಕ್ಕಾಟದ ಎಫೆಕ್ಟ್ ರವಿಕುಮಾರ್ಗೆ ತಟ್ಟಿದೆ ಕೂಡಲೇ ವಾಸ್ತವ್ಯವನ್ನು ಕಚೇರಿಯಿಂದ ಶಾಸಕರ ಭವನಕ್ಕೆ ಸ್ಥಳಾಂತರ ಮಾಡುವಂತೆ ಮೌಖಿಕ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೂಚನೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಿರ್ದೇಶನದ ಪ್ರಕಾರ ಕಚೇರಿ ಖಾಲಿ ಮಾಡಿ ಎನ್ನುವ ಸಂದೇಶವನ್ನು ತಲುಪಿಸಲಾಗಿದೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಶಾಸಕರಿಗೆ ಶಾಸಕರ ಭವನದಲ್ಲಿ ಕೊಠಡಿ ಕೊಡಲಾಗುತ್ತದೆ ಅದರಂತೆ ನಿಮ್ಮ ಖೋಟಾದ ಕೊಠಡಿ ಪಡೆದುಕೊಂಡು ಅಲ್ಲಿಗೆ ಹೋಗಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರವಿಕುಮಾರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಜೊತೆಯಲ್ಲಿಯೇ ಸದಸ್ಯತ್ವ ಅಭಿಯಾನದ ರಾಜ್ಯ ಸಂಚಾಲಕರಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಖುದ್ದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೂಡ ರವಿಕುಮಾರ್ ನೇತೃತ್ವದಲ್ಲಿ ನಡೆದ ಅಭಿಯಾನಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದು ಇಷ್ಟೆಲ್ಲದರ ನಡುವೆ ಈಗ ಏಕಾಏಕಿ ಪಕ್ಷದ ಕಚೇರಿಯಿಂದ ಹೊರ ಹೋಗುವಂತೆ ಬಂದ ನಿರ್ದೇಶನ ರವಿಕುಮಾರ್ಗೆ ಅಚ್ಚರಿ ಮೂಡಿಸಿದೆ.
ಈ ಎಲ್ಲಾ ಮಾಹಿತಿಯನ್ನು ರವಿಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನಕ್ಕೆ ತಂದಿದ್ದಾರೆ. ಆದರೆ, ಸಿಎಂ ಯಾವುದೇ ಭರವಸೆ ನೀಡಿಲ್ಲ ಎನ್ನಲಾಗಿದೆ. ಸದ್ಯ ಪಕ್ಷದಲ್ಲಿ ನಡೆಯಿತ್ತಿರುವ ಎಲ್ಲ ವಿದ್ಯಮಾನಗಳಿಂದಲೂ ಸಿಎಂ ಬಿಎಸ್ವೈ ಅಂತರ ಕಾಯ್ದುಕೊಂಡಿದ್ದು ತಮ್ಮ ಪರ ಸಿಎಂ ವಕಾಲತ್ತು ವಹಿಸಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿದ್ದ ರವಿಕುಮಾರ್ಗೆ ನಿರಾಸೆ ಮೂಡಿಸಿದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಬಂದಿದೆ.