ಬೆಂಗಳೂರು:ಉಪಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಿ ಎಲ್ಲಾ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎನ್ನುವ ವಿಶ್ವಾಸದ ಮಾತುಗಳನ್ನಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತದಾನದ ಬಳಿಕ ಮೌನಕ್ಕೆ ಜಾರಿದ್ದಾರೆ. ಮಾಧ್ಯಮಗಳಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡದೇ ದೂರ ಉಳಿದಿದ್ದಾರೆ.
ಉಪಚುನಾವಣಾ ಮತದಾನಕ್ಕೂ ಮೊದಲು ಸಿಎಂ ಯಡಿಯೂರಪ್ಪಗೆ ಇದ್ದ ವಿಶ್ವಾಸ ಈಗ ಕಡಿಮೆಯಾಗಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಮತದಾನ ಮುಕ್ತಾಯಗೊಂಡು ಒಂದು ದಿನ ಕಳೆದರೂ ಚುನಾವಣೆ ಕುರಿತು ಒಂದೇ ಒಂದು ಹೇಳಿಕೆಯನ್ನೂ ಸಿಎಂ ನೀಡಿಲ್ಲ. ಕನಿಷ್ಠ ಪತ್ರಿಕಾ ಹೇಳಿಕೆಯನ್ನೂ ಅವರು ಬಿಡುಗಡೆ ಮಾಡಿಲ್ಲ.
ಉಪಚುನಾವಣೆಗೆ ಮತದಾನ ಮುಗಿದ ನಂತರ ಪ್ರತಿಕ್ರಿಯೆ ಕೊಡಲು ಹಿಂದೇಟು ಹಾಕ್ತಿರುವ ಸಿಎಂ, ಎಲ್ಲೆ ಹೋದರೂ ಮತದಾನದ ಬಗ್ಗೆ ತಟಿಬಿಚ್ಚುತ್ತಿಲ್ಲ. ಮುಖ್ಯಮಂತ್ರಿ ಅವರ ಈ ನಡೆ ನಿರೀಕ್ಷೆಯಂತೆ ಮತದಾನ ಆಗಿಲ್ವಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.
ಮಹಾನಗರ ಬೆಂಗಳೂರಿನ ಮತದಾರರು ಬಿಜೆಪಿ ಕೈಹಿಡಿಯಲಿದ್ದಾರೆ ಎನ್ನುವ ಲೆಕ್ಕಾಚಾರದಲ್ಲಿದ್ದ ಸಿಎಂಗೆ ಮತದಾನದ ಪ್ರಮಾಣ ಕಡಿಮೆಯಾಗಿರುವುದು ಆತಂಕ ಸೃಷ್ಟಿಸಿದೆ ಎನ್ನಲಾಗುತ್ತಿದೆ. ಮತಗಟ್ಟೆ ಸಮೀಕ್ಷಾ ವರದಿ ಬಿಜೆಪಿ ಪರವಾಗಿಯೇ ಇದ್ದರೂ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಕೆಲ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನುವ ಮಾಹಿತಿ ಮುಖ್ಯಮಂತ್ರಿ ಅವರನ್ನು ಚಿಂತೆಗೀಡು ಮಾಡಿದೆ. ಹಾಗಾಗಿ ಅವರು ಮತದಾನದ ನಂತರ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗುತ್ತಿಲ್ಲ ಎಂದು ತಿಳಿದುಬಂದಿದೆ.