ಬೆಂಗಳೂರು : ಸಾಕ್ಷಿಗೆಂದು ಕರೆದು ಆಸ್ತಿ ಪತ್ರಗಳಿಗೆ ಸಹಿ ಹಾಕಿಸಿಕೊಂಡ ಆರೋಪ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ಸಹೋದರಿಯೊಬ್ಬರು ತನ್ನ ಮೂವರು ಸಹೋದರರ ವಿರುದ್ಧ ದಾಖಲಿಸಿದ್ದ ಅಸಲು ದಾವೆ(ಒರಿಜಿನಲ್ ಸೂಟ್)ನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, ದಾವೆಗೆ ಸಂಬಂಧಿಸಿದಂತೆ ವಿಚಾರಣೆ ನಡೆದು ಸತ್ಯಾಂಶ ಹೊರಬೇಕಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಬೆಂಗಳೂರಿನ ನಿವಾಸಿಗಳಾದ ಜಿ. ಎಸ್. ಮಹೇಂದ್ರ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ. ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಸಹೋದರರು ತಪ್ಪಾಗಿ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಮೋಸ ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಆದ್ದರಿಂದ ವಿಚಾರಣೆ ಮುಂದುವರೆಸಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿಯ ಎಲ್ಲ ಪುಟಕ್ಕೆ ಸಹಿ ಹಾಕಬೇಕು ಎಂಬ ಅಂಶ ಸರಿಯಿದ್ದರೂ, ಪರಿಶೀಲನಾ ಪುಟ ಮತ್ತು ಅಫಿಡವಿಟ್ಗೆ ಸಹಿ ಮಾಡಿದ್ದಾರೆ. ಎಲ್ಲ ಪುಟಕ್ಕೆ ಸಹಿ ಹಾಕಿಲ್ಲ ಎಂಬ ಕಾರಣಕ್ಕೆ ಅರ್ಜಿ ವಜಾಗೊಳಿಸಲು ಅರ್ಹವಲ್ಲ ಎಂದು ಪೀಠ ತಿಳಿಸಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯದ ದಾವೆ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದೆ.
ಅಲ್ಲದೆ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ. ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸುವ ಅಗತ್ಯ ಕಂಡು ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸಿವಿಲ್ ದಾವೆ ವಿಚಾರಣೆ ಮುಂದುವರೆಯಬೇಕಾಗಿದ್ದು, ಸತ್ಯಾಂಶ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ :ಆಸ್ಟ್ರೇಲಿಯಾ ದೇಶದಲ್ಲಿ ನೆಲೆಸಿರುವ ಕೋಮಲಾ ಎಂಬುವರು, ತಮ್ಮ ಪತಿ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸಹೋದರರು ಪ್ರಕರಣವೊಂದರ ಸಾಕ್ಷಿಗೆಂದು ಉಪನೋಂದಣಿ ಕಚೇರಿಯಲ್ಲಿ ಸಹಿ ಪಡೆದುಕೊಂಡಿದ್ದರು. ಇದಾದ ಬಳಿಕ ಆಸ್ತಿಯ ಹಕ್ಕನ್ನು ಬಿಟ್ಟು ಕೊಟ್ಟಿರುವುದಾಗಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, 2019ರ ಜುಲೈ 1ರಂದು ಸಹಿ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಕುಟುಂಬದ ಒಟ್ಟು ಆಸ್ತಿಯಲ್ಲಿ ಆರನೇ ಒಂದು ಭಾಗ ತನಗೆ ಬರಬೇಕಾಗಿದೆ. ಆದರೆ, ಸಹೋದರರು ಬಿಡುಗಡೆ ಮಾಡಿರುವ ದಾಖಲೆಗಳು ಸತ್ಯಕ್ಕೆ ದೂರವಾಗಿದ್ದು, ಈ ಸಂಬಂಧ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಗಿರುವ ನೋಂದಣಿ ರದ್ದುಪಡಿಸಬೇಕು ಎಂದು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಕೋಮಲಾ ಅವರು ಮಹೇಂದ್ರ, ರವೀಂದ್ರ ಮತ್ತು ಜ್ಞಾನೇಂದ್ರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಅಸಲು ದಾವೆ ಹೂಡಿದ್ದರು. ಇದನ್ನು ರದ್ದು ಮಾಡುವಂತೆ ಸಹೋದರರು ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದು ರದ್ದಾದ ಹಿನ್ನೆಲೆಯಲ್ಲಿ ಹೈಕೋರ್ಟ್ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದಾವೆ ಹೂಡಿರುವವರು ಆಸ್ಟ್ರೇಲಿಯಾದಿಂದಲೇ ಭಾರತದ ದಾಖಲೆಗಳಿಗೆ ಸಹಿ ಹಾಕಿ ದಾವೆ ಹೂಡಿದ್ದಾರೆ. ಅಲ್ಲದೆ, ಅಫಿಡವಿಟ್ಗೆ ಆಸ್ಟ್ರೇಲಿಯಾದಿಂದ ಸಹಿ ಮಾಡಿದ್ದಾರೆ. ಅಲ್ಲದೆ, ದಾವೆ ಸೂಕ್ತ ರೀತಿಯಲ್ಲಿ ಸಲ್ಲಿಕೆ ಮಾಡಿಲ್ಲ. ಕೋರ್ಟ್ ಶುಲ್ಕವನ್ನು ಆಸ್ತಿಯ ಮೌಲ್ಯಕ್ಕೆ ತಕ್ಕಂತೆ ಪಾವತಿ ಮಾಡಬೇಕಾಗಿದೆ. ಆದರೆ, ಕೇವಲ 25 ರೂ.ಗಳನ್ನು ಮಾತ್ರ ಪಾವತಿಸಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಿದರು.
ಜತೆಗೆ, ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿರುವ ದಾವೆಗೆ ಪ್ರತಿ ಪುಟಕ್ಕೂ ಸಹಿ ಹಾಕಿಲ್ಲ ಎಂಬ ವಾದವನ್ನು ತಳ್ಳಿ ಹಾಕಿಲ್ಲ. ಅಲ್ಲದೆ, ಶಿವಮೊಗ್ಗದಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ತಮ್ಮಿಂದ ಸಾಕಷ್ಟು ಹಣಕಾಸು ನೆರವು ಪಡೆದುಕೊಂಡಿದ್ದಾರೆ. ಪ್ರಕರಣ ರದ್ದು ಮಾಡಬೇಕು ಎಂದು ಕೋರಿದ್ದರು.
ಇದನ್ನೂ ಓದಿ :ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ 2 ಸಿನಿಮಾ ಹಾಡು ಬಳಕೆ ಆರೋಪ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್