ಬೆಂಗಳೂರು: ವೃತ್ತಿಪರ ಕೋರ್ಸುಗಳಲ್ಲಿ ಒಂದಾದ ಐಟಿಐ ಪರೀಕ್ಷೆಯ ಸುಧಾರಣೆ ಹಾಗೂ ಗ್ರಾಮೀಣ ಪ್ರದೇಶದ ಕಡುಬಡ ಮಹಿಳೆಯರಿಗೆ ಹೈನುಗಾರಿಕೆ ಮೂಲಕ ಜೀವನೋಪಾಯ ಕಲ್ಪಿಸಿಕೊಡುವ 'ಕ್ಷೀರ ಸಂಜೀವಿನಿ ಯೋಜನೆ' ಒಪ್ಪಂದಗಳಿಗೆ ಡಿಸಿಎಂ ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಸಹಿ ಹಾಕಲಾಯಿತು.
ಯುವಜನರಿಗೆ ವೃತ್ತಿಪರ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾಗಿರುವ ಮಹಿಳೆಯರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಇವೆರಡೂ ಒಪ್ಪಂದಗಳು ಅತ್ಯಂತ ಪರಿಣಾಮಕಾರಿಯಾಗಿ ನೆರವಾಗುತ್ತವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇನ್ನು ಮುಂದೆ ಕೆಇಎಯಿಂದ ಐಟಿಐ ಪರೀಕ್ಷೆ: ಐಟಿಐ (ಎನ್‌ಸಿವಿಟಿ ಮತ್ತು ಎಸ್‌ಸಿವಿಟಿ) ಪರೀಕ್ಷೆಗಳನ್ನು ರಾಜ್ಯ ವೃತ್ತಿಪರ ತರಬೇತಿ ಸಂಸ್ಥೆಯ ಬದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಮೂಲಕ ನಿರ್ವಹಿಸುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದಕ್ಕೆ ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್ ಸಹಿ ಹಾಕಿ, ಡಿಸಿಎಂ ಸಮ್ಮುಖ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.
ಈವರೆಗೆ ವೃತ್ತಿಪರ ತರಬೇತಿ ಸಂಸ್ಥೆಯೇ ಐಟಿಐ ಪರೀಕ್ಷೆಯನ್ನು ನಡೆಸುತ್ತಿತ್ತು. ಆದರೆ, ಆ ಪರೀಕ್ಷಾ ವಿಧಾನದ ಬಗ್ಗೆ ತೀವ್ರ ಆಕ್ಷೇಪಗಳಿದ್ದವು. ಜತೆಗೆ, ಪರೀಕ್ಷೆಯೂ ಪಾರದರ್ಶಕವಾಗಿ ನಡೆಯುತ್ತಿರಲಿಲ್ಲ ಎಂಬ ದೂರುಗಳೂ ಇದ್ದವು. ಈ ಬಗ್ಗೆ ಡಿಸಿಎಂ ಡಾ.ಅಶ್ವತ್ಥನಾರಾಯಣ ಗಮನಕ್ಕೂ ಬಂದು ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದರು. ತಜ್ಞರು ಪರಿಶೀಲನೆ, ಅಧ್ಯಯನ ನಡೆಸಿ ಸಲಹೆಗಳನ್ನು ನೀಡಿದ್ದರು. ಅದರ ಫಲವಾಗಿ ಐಟಿಐ ಪರೀಕ್ಷೆ ನಡೆಸುವ ಅಧಿಕಾರವನ್ನು ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗುತ್ತಿದೆ. ಈ ಸಂಬಂಧ ಮಹತ್ವದ ಒಪ್ಪಂದವಾಗಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದರು.
ಇನ್ನು ಮುಂದೆ ಕೈಗಾರಿಕಾ ತರಬೇತಿ ಇಲಾಖೆಯ ಸಹಕಾರದೊಂದಿಗೆ ಪರೀಕ್ಷೆ ಪ್ರವೇಶ ಪತ್ರಗಳ ಮುದ್ರಣ, ಪಟ್ಟಿ ಸಂಖ್ಯೆಗಳ ಮುದ್ರಣ, ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು, ಆಯಾ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ ಇತ್ಯಾದಿ ಕಾರ್ಯಗಳನ್ನು ಪರೀಕ್ಷಾ ಪ್ರಾಧಿಕಾರವೇ ಮಾಡುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದರು.