ಬೆಂಗಳೂರು :ಕೋವಿಡ್ ಸೋಂಕು ಶ್ವಾಸಕೋಶದ ರೋಗವಾದರೂ ಇದರಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಹಲವು ಪ್ರಕರಣಗಳಲ್ಲಿ ಕಾಣಬಹುದಾಗಿದೆ.
ಕೋವಿಡ್‍ನ ಬಹು ಮುಖ್ಯವಾದ ಸಂಕೀರ್ಣತೆಯೆಂದರೆ ರಕ್ತ ಹೆಪ್ಪುಗಟ್ಟುವುದು. ಸಣ್ಣ ಮಧ್ಯಮ ಮತ್ತು ದೊಡ್ಡ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಕಂಡು ಬರುತ್ತಿದ್ದು, ಇದನ್ನು ತಿಳಿಗೊಳಿಸಲೆಂದು ವೈದ್ಯರು ರೋಗಿಗಳಿಗೆ ಹೆಪ್ಪುಗಟ್ಟುವಿಕೆ ನಿರೋಧಕ ಔಷಧಗಳನ್ನು ನೀಡುತ್ತಿದ್ದಾರೆ.
ಕಣ್ಣುಗಳಿಗೆ ಸಂಬಂಧಿಸಿದಂತೆ ಕಣ್ಣುಗುಡ್ಡೆಗಳ ಹಿಂಬದಿಯಲ್ಲಿರುವ ಅಂಗಾಂಶದ ರೆಟಿನಾದಲ್ಲಿ ಸಣ್ಣ ಸಣ್ಣ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರೋಗಿಗಳಿಗೆ ಇದರ ಅರಿವಾಗಬಹುದು ಅಥವಾ ಆಗದೇ ಇರಬಹುದು.
ಒಂದು ವೇಳೆ ಇದರ ಅರಿವಾದರೆ ಒಂದು ಕಣ್ಣಿನ ದೃಷ್ಟಿ ಸ್ವಲ್ಪ ಕಡಿಮೆ ಇರಬಹುದು ಅಥವಾ ಹೆಚ್ಚೂ ಇರಬಹುದನ್ನ ಗಮನಿಸಬಹುದು ಅಂತಾರೆ ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್ನ ಡಾ.ರಾಮ್ ಶ್ರೀಕಾಂತ್ ಮಿರ್ಲೆ. ಇಂತಹ ಸಂದರ್ಭಗಳಲ್ಲಿ ರೋಗಿಯು ಕೂಡಲೇ ಹತ್ತಿರದ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.
ಕೋವಿಡ್ನಿಂದ ಕಣ್ಣಿನ ಒಳ ಭಾಗಗಳಲ್ಲಿ ಅಡ್ಡಪರಿಣಾಮ :ಕೋವಿಡ್‍ನ ಮತ್ತೊಂದು ಅಡ್ಡ ಪರಿಣಾಮವೆಂದರೆ, ಕಣ್ಣಿನ ಒಳ ಭಾಗಗಳಲ್ಲಿ ಉರಿ ಊತ(ಇನ್‍ಫ್ಲೇಮೇಷನ್) ಕಂಡು ಬರುವುದು. ಇದಕ್ಕೆ ರೆಟಿನೈಟಿಸ್ ಅಥವಾ ಯುವೆಟಿಸ್ (uveitis) ಎಂದು ಕರೆಯಲಾಗುತ್ತದೆ.
ಇದು ಅತ್ಯಂತ ವಿರಳ ಪ್ರಕರಣ ಎಂಬುದನ್ನು ನೆನಪಿನಲ್ಲಿಡಬೇಕು. ಕೋವಿಡ್ ಸಾಮಾನ್ಯವಾಗಿ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆ ಮೇಲೆ ಕಡಿಮೆ ಪ್ರಮಾಣದ ಪರಿಣಾಮ ಬೀರಬಹುದು.
ಸ್ಟೆರಾಯ್ಡ್ ಬಳಕೆ ಯಾವಾಗ ಅನಿವಾರ್ಯ?: ಕೋವಿಡ್ ಸಮಸ್ಯೆ ಚಿಕಿತ್ಸೆಯಲ್ಲಿ ಸ್ಟೆರಾಯ್ಡ್ಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಕೋವಿಡ್ ವೈರಸ್ ತಗುಲಿದ ಆರಂಭಿಕ ಹಂತದಲ್ಲಿ ಈ ಸ್ಟೆರಾಯ್ಡ್‍ಗಳನ್ನು ಉಪಯೋಗಿಸಬಾರದು.