ಬೆಂಗಳೂರು:ಕೇಂದ್ರ ಸರ್ಕಾರವೇ ಕಾರ್ಮಿಕರ ಸಂಪೂರ್ಣ ರೈಲು ಪ್ರಯಾಣ ದರವನ್ನು ಭರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನ ಕೇಂದ್ರ ಸರ್ಕಾರ ಭರಿಸಬೇಕು.. ವಿಧಾನಸೌಧದಲ್ಲಿ ವಿರೋಧಪಕ್ಷಗಳ ನಾಯಕರು, ರೈತ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೈಲುಗಳ ಮೂಲಕ ಕಾರ್ಮಿಕರನ್ನು ಕಳುಹಿಸಿಕೊಡುವ ಸಂಬಂಧ ಸರ್ಕಾರ ತೆಗೆದುಕೊಂಡ ಕ್ರಮ ಸರಿಯಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಗೊಂದಲವಿದೆ. ಕಾರ್ಮಿಕರ ರೈಲ್ವೆ ಟಿಕೆಟ್ ದರ ಯಾರು ಕೊಡಬೇಕು ಅನ್ನೋದು ಸ್ಪಷ್ಟವಾಗಲಿ. ಕೇಂದ್ರ ಸರ್ಕಾರವೇ ಕಾರ್ಮಿಕರ ಸಂಪೂರ್ಣ ಪ್ರಯಾಣ ದರ ಕೊಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಇದಕ್ಕೆ ಹಣ ಕೊಡಬೇಕು ಅಂತಾ ಕೇಂದ್ರ ಸರ್ಕಾರ ಹೇಳೋದು ಸರಿಯಲ್ಲ. ಪ್ರಧಾನಿ ಕೇರ್ ಫಂಡ್‌ಗೆ 1500 ಕೋಟಿ ರೂ. ರಾಜ್ಯದ ಕೈಗಾರಿಕೋದ್ಯಮಿಗಳು ಕೊಟ್ಟಿದ್ದಾರೆ. ಆ ಹಣವನ್ನು ಕಾರ್ಮಿಕರ ಪ್ರಯಾಣಕ್ಕೆ ಬಳಕೆ ಮಾಡಬೇಕು. ಕೇಂದ್ರ ಸರ್ಕಾರವೇ ಎಲ್ಲಾ ಹಣ ಕೊಡಬೇಕು ಎಂದು ಆಗ್ರಹಿಸಿದರು. ರಾಜ್ಯದ ಮುಖ್ಯಮಂತ್ರಿ ಫಂಡ್‌ಗೆ ಬಹಳ ಹಣ ಬಂದಿದೆ. ಎಷ್ಟು ಹಣ ಖರ್ಚು ಮಾಡಲಾಯ್ತು? ಎಂಬ ಬಗ್ಗೆ ಮಾಹಿತಿ ನೀಡಲು ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು. ಪ್ರತಿಪಕ್ಷವಾದ ನಮಗೆ ಈ ಬಗ್ಗೆ ಮಾಹಿತಿ ಇಲ್ಲ. ಕಾರ್ಮಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳಬೇಡಿ. ಅವರಿಗೆ ಊಟ ಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ರಾಜ್ಯದ ಕಾರ್ಮಿಕರನ್ನು ಕಳುಹಿಸಲು ನಮ್ಮ ಸರ್ಕಾರ ಮಾಡಿದ ಕ್ರಮ ಸರಿಯಲ್ಲ. ಗರ್ಭಿಣಿಯರು, ಮಕ್ಕಳು, ವೃದ್ಧರು ರಾತ್ರಿ ಬಸ್ ನಿಲ್ದಾಣದಲ್ಲಿ ಇದ್ದರು. ಕಾಂಗ್ರೆಸ್‌ನವರು ಹೇಳಿದ ಮೇಲೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಯಿತು ಎಂದು ಕಿಡಿಕಾರಿದರು. ಊರಿಗೆ ಹೋಗಿರುವ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡಬೇಕು. ಈ ಯೋಜನೆಯಲ್ಲಿರುವ ಕೆಲವು ನಿರ್ಬಂಧಗಳನ್ನು ತೆಗೆದು ಹಾಕಬೇಕು. ಊರಿಗೆ ಹೋದ ಕಾರ್ಮಿಕರಿಗೆ ನರೇಗಾ ಜಾಬ್ ಕಾರ್ಡ್ ಇಲ್ಲ. ಅದಕ್ಕೆ ಅವರಿಗೆ ಕೆಲಸ ಕೊಡಲು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು. ವಿರೋಧ ಪಕ್ಷಗಳ ನಾಯಕರ ಜೊತೆ ಸಭೆ:ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷಗಳು, ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾದ ಹಕ್ಕೊತ್ತಾಯಗಳ ಪತ್ರದ ಬಗ್ಗೆ ಚರ್ಚೆ ನಡೆಸಲಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಸಭೆ.. ಪ್ರತಿಪಕ್ಷಗಳ ಮುಖಂಡರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿಗಳನ್ನು ಗುರುವಾರ ಅಥವಾ ಶುಕ್ರವಾರ ಭೇಟಿಯಾಗಿ ಹಕ್ಕೊತ್ತಾಯಗಳ ಪತ್ರ ಸಲ್ಲಿಸಲಿದೆ. ಪತ್ರದಲ್ಲಿ ಇರಬೇಕಾದ ಅಂಶಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಿತು. ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಐಎಂ, ಲೋಕ ತಾಂತ್ರಿಕ ಜನತಾದಳ, ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.