ಬೆಂಗಳೂರು: ಸಿದ್ಧಾರ್ಥ್ ನಾಪತ್ತೆ ಪ್ರಕರಣ ಒಂದು ದುರಂತ. ಅವರು ಧೃತಿಗೆಡಬಾರದಿತ್ತು. ನನಗೂ ಅವರಿಗೂ 35 ವರ್ಷಗಳ ಪರಿಚಯ. ತುಂಬಾ ಒಳ್ಳೆಯ ಹುಡುಗ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಮಾತನಾಡಿದ ಗೌಡರು, ಎಸ್.ಎಂ.ಕೃಷ್ಣ ಅವರು ನನಗಿಂತ ಒಂದು ವರ್ಷ ಹಿರಿಯರು. ಈಗ ಅವರು ಇದನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಅವರನ್ನು ಭೇಟಿ ಮಾಡಿ ಧೈರ್ಯ ಹೇಳಿ ಬಂದಿದ್ದೇನೆ ಎಂದರು.
ಐಟಿ ಅಧಿಕಾರಿಗಳು ತೊಂದರೆ ಕೊಟ್ಟಿದ್ದರು ಎಂದು ಸಿದ್ಧಾರ್ಥ್ ಬರೆದ ಪತ್ರದ ಬಗ್ಗೆ ಮಾತನಾಡಿದ ಅವರು, ಐಟಿ ದಾಳಿ ಆಗುತ್ತಿರುವ ರೀತಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ನೀವೇ ಇದನ್ನು ವಿಶ್ಲೇಷಣೆ ಮಾಡಿ. ಈ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.
ಸಿದ್ಧಾರ್ಥ್ ತುಂಬಾ ಮುಂದೆ ಹೋಗುತ್ತಾ ಇದ್ದರು, ಉದಯೋನ್ಮುಖ ಉದ್ಯಮಿ. ಎಲ್ಲಾ ಷೇರು ಕುಸಿದು ಏನು ತೊಂದರೆ ಆಯಿತೆಂದು ಗೊತ್ತಿಲ್ಲ. ಹೆದರಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಯಾಕೆ ಆ ಕೆಟ್ಟ ಗಳಿಗೆ ಬಂತೋ ಗೊತ್ತಿಲ್ಲ. ಪ್ರತಿ ನಿತ್ಯ ಏನು ನಡೀತಿದೆ ಅಂತ ಎಲ್ಲರೂ ಗಮನಿಸುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತಿವೆ ಅಂತ ಎಲ್ಲರಿಗೂ ಗೊತ್ತಿದೆ. ಮೇಲಿಂದ ಸೂಚನೆ ಬಂದ ಹಾಗೆ ವರ್ತನೆ ಮಾಡುತ್ತಾರೆ ಅಷ್ಟೇ. ನನಗೂ ಅದಕ್ಕೂ ಸಂಬಂಧ ಇಲ್ಲ. ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 59 ಕಡೆ ಐಟಿ ದಾಳಿ ಆಗಿದೆ. ಇದರ ಬಗ್ಗೆ ಯಾರನ್ನು ಪ್ರಶ್ನೆ ಮಾಡೋದು ಎಂದು ಗೌಡರು ಅಸಮಾಧಾನ ತೋಡಿಕೊಂಡರು.