ಬೆಂಗಳೂರು: ರಾಜ್ಯದ ವಿವಿಧ ಗಡಿ ವಿವಾದಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕರು ಸೇರಿಸಿಕೊಂಡು ವಿಶೇಷ ಸಲಹಾ ಸಮಿತಿ ರಚಿಸಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಬೆಳಗಾವಿ ಗಡಿ ವಿವಾದ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರೆದಿರುವ ಪತ್ರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿ ಗಡಿವಿವಾದಕ್ಕೆ ಸಂಬಂಧಿಸಿದಂತೆ ನೀವು ಬರೆದಿರುವ ಪತ್ರ ತಲುಪಿದೆ. ಅತ್ಯಂತ ಮಹತ್ವಪೂರ್ಣವಾದ ಈ ವಿಷಯದ ಬಗ್ಗೆ ವಿಳಂಬವಾಗಿಯಾದರೂ ಕಾರ್ಯಪ್ರವೃತ್ತರಾಗಿರುವುದು ಸಂತೋಷ ಮತ್ತು ಸಮಾಧಾನದ ವಿಷಯ ಎಂದಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯದ ಬಗ್ಗೆ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಅತೀವ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ನಾನು ಒಂದು ಪತ್ರಿಕಾ ಹೇಳಿಕೆ ನೀಡಿ, ಕರ್ನಾಟಕ ಸರ್ಕಾರ ಕೂಡಾ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ರಾಜ್ಯದ ಕಾರ್ಯತಂತ್ರವನ್ನು ರೂಪಿಸಬೇಕೆಂದು ಸಲಹೆ ನೀಡಿದ್ದೆ.
ಮಹಾರಾಷ್ಟ್ರ ಸರ್ಕಾರ ಗಡಿವಿವಾದದ ಬಗ್ಗೆ ಸತತವಾಗಿ ವಿರೋಧಪಕ್ಷಗಳ ಜೊತೆ ಸಮಾಲೋಚನೆ ನಡೆಸುತ್ತಾ ಬಂದಿದೆ. ಕಳೆದ ಒಂದು ತಿಂಗಳಿನಿಂದ ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿರುವ ವಿಚಾರಣೆಯನ್ನು ಎದುರಿಸಲು ವಿರೋಧಪಕ್ಷಗಳ ನಾಯಕರನ್ನೂ ಸೇರಿಸಿಕೊಂಡು 16 ಸದಸ್ಯರ ಸಲಹಾ ಸಮಿತಿಯನ್ನೂ ಕೂಡಾ ರಚಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಈ ಸಮಿತಿ ಈಗಾಗಲೇ ಸಭೆ ನಡೆಸಿ ನ್ಯಾಯಾಂಗದ ಹೋರಾಟಕ್ಕೆ ಕಾರ್ಯತಂತ್ರಗಳನ್ನು ರೂಪಿಸಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ನಡೆಯುವ ಗಡಿ ವ್ಯಾಜ್ಯ ವಿಚಾರಣೆಯ ಮೇಲುಸ್ತುವಾರಿಗಾಗಿ ಇಬ್ಬರು ಸಚಿವರ ಸಮಿತಿಯನ್ನು ಕೂಡಾ ಮಹಾರಾಷ್ಟ್ರ ಸರ್ಕಾರ ರಚಿಸಿದೆ. ಆದರೆ ಕರ್ನಾಟಕ ಸರ್ಕಾರ ಗಡಿವಿವಾದದ ಬಗ್ಗೆ ಮಹಾರಾಷ್ಟ್ರದಷ್ಟು ಮುತುವರ್ಜಿ ವಹಿಸಿಲ್ಲ ಎನ್ನುವುದು ವಿಷಾದನೀಯವಾದರೂ ವಾಸ್ತವವಾಗಿದೆ. ಇಂದು (ನವಂಬರ್ 23) ಸುಪ್ರೀಂ ಕೋರ್ಟ್ ಗಡಿ ವಿವಾದದ ಮೊಕದ್ದಮೆ ವಿಚಾರಣೆ ನಡೆಯಲಿದ್ದರೂ ಇಲ್ಲಿಯವರೆಗೆ ವಿರೋಧಪಕ್ಷಗಳ ಜೊತೆ ಸಮಾಲೋಚನೆ ನಡೆಸುವ ಸೌಜನ್ಯವನ್ನೂ ತೋರದಿರುವುದು ವಿಷಾದನೀಯ.
ಮುಖ್ಯಮಂತ್ರಿಗಳು ನಿನ್ನೆಯಷ್ಟೇ (ನವೆಂಬರ್ 22) ನಮ್ಮ ವಕೀಲರ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ. ಈ ವಿಷಯವನ್ನು ಸರ್ಕಾರ ಎಷ್ಟು ಗಂಭೀರವಾಗಿ ಸ್ವೀಕರಿಸಬೇಕಿತ್ತೋ ಅಷ್ಟು ಗಂಭೀರವಾಗಿ ಸ್ವೀಕರಿಸಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅವರನ್ನು ಗಡಿಭಾಗದ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ್ದೆ. ಆದರೆ ಈಗಿನ ಸರ್ಕಾರದಲ್ಲಿ ಗಡಿ ಉಸ್ತುವಾರಿಗೆ ಸಚಿವರನ್ನು ನೇಮಿಸದೆ ನಿರ್ಲಕ್ಷ್ಯ ತೋರಿದೆ. ಇಷ್ಟು ಮಾತ್ರವಲ್ಲ, ಗಡಿ ಸಂರಕ್ಷಣಾ ಸಮಿತಿ ಕೂಡಾ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಸಭೆ ನಡೆಸದೆ ನಿಷ್ಕ್ರೀಯವಾಗಿದೆ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರು ಸೇರಿದಂತೆ ಸಮಿತಿಯ ಇಬ್ಬರು ಸದಸ್ಯರು ಮೃತರಾಗಿದ್ದಾರೆ. ಗಡಿ ಸಂರಕ್ಷಣಾ ಸಮಿತಿಯನ್ನು ಪುನರ್ರಚಿಸುವ ಜೊತೆಯಲ್ಲಿ ಉನ್ನತಾಧಿಕಾರದ ಸಮಿತಿಯನ್ನು ರಚಿಸುವಂತೆ ಕನ್ನಡ ಸಂಘಟನೆಗಳ ಬೇಡಿಕೆಯನ್ನೂ ಕೂಡಾ ರಾಜ್ಯ ಸರ್ಕಾರ ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.