ಬೆಂಗಳೂರು: ಬಿಜೆಪಿಯವರು ಒಳ್ಳೆಯ ಬಜೆಟ್ ಮಂಡಿಸೋದಕ್ಕೆ ಸಾಧ್ಯವೇ ಇಲ್ಲ. ನನ್ನ ಅಂದಾಜಿನ ಪ್ರಕಾರ 20 ಸಾವಿರ ಕೋಟಿಯಷ್ಟು ಖೋತಾ ಬಜೆಟ್ ಆಗಬಹುದು ಎಂದು ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಮಾಧ್ಯಮದವರೊಂದಿಗೆಮಾತನಾಡಿದ ಅವರು, ಈಗಾಗಲೇ ಆರ್ಥಿಕ ಹಿಂಜರಿತ ಇದೆ. ಕೇಂದ್ರ ಸರ್ಕಾರ ಯಾವುದೇ ಹಣಕಾಸಿನ ನೆರವನ್ನು ನೀಡ್ತಿಲ್ಲ. ನಾವು ಶೇ.100 ರಷ್ಟು ಹಣ ಸಂಗ್ರಹಿಸಿ ಕೊಟ್ಟರೆ ಅದರಲ್ಲಿ ರಾಜ್ಯಕ್ಕೆ ಬರೋದು ಬರೀ ಶೇ.45 ಮಾತ್ರ. ಉಳಿದ ಶೇ.55 ರಷ್ಟು ಹಣ ಕೇಂದ್ರವೇ ಉಳಿಸಿಕೊಳ್ಳುತ್ತದೆ. ನಮ್ಮ ಜಿಎಸ್ಟಿ ಹಣವನ್ನೂ ಕೊಟ್ಟಿಲ್ಲ, ಬರಬೇಕಾದ ಯಾವ ಅನುದಾನವೂ ಸಿಕ್ಕಿಲ್ಲ. ಬಿಜೆಪಿಯ ಯಾವೊಬ್ಬ ಸಂಸದ ಕೂಡ ಈ ಬಗ್ಗೆ ಮಾತನಾಡಲ್ಲ. ಆರಿಸಿ ಕಳಿಸಿದ 25 ಸಂಸದರೂ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಸಿಎಂ ಯಡಿಯೂರಪ್ಪನೂ ಮಾತಾಡಲ್ಲ, ಯಾವೊಬ್ಬ ಸಚಿವರೂ ಮಾತಾಡಲ್ಲ ಎಂದರು.
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧದ ಹೇಳಿಕೆ ವ್ಯವಸ್ಥಿತ ಸಂಚು, ಇದರ ಹಿಂದೆ ಕಾಣದ ಕೈಗಳಿವೆ. ಸಂಘ ಪರಿವಾರದವರು ಇವರಿಂದ ಮಾತನಾಡಿಸುತ್ತಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗಡೆ ಗಾಂಧಿಜಿ ಬಗ್ಗೆ ಮಾತನಾಡಿದ್ರು, ಅವರ ವಿರುದ್ದ ಏನಾದ್ರೂ ಕ್ರಮ ತೆಗೆದುಕೊಂಡರಾ? ಪಿತೂರಿ ನಡೀತಾ ಇದೆ, ಆರ್ಎಸ್ಎಸ್ ನವರು ಕೇಂದ್ರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.