ಬೆಂಗಳೂರು: ಅನುಮೋದನೆ, ಪ್ರಸ್ತಾವನೆ, ಖರ್ಚುವೆಚ್ಚ ಗೊತ್ತಿಲ್ಲದೆ ನಾನು 13 ಬಾರಿ ಬಜೆಟ್ ಮಂಡಿಸಿದ್ದೇನೆಯೇ, ಶಾಸಕನಿಂದ ಹಿಡಿದು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ನನಗೆ ಅನುಮೋದನೆ ಬಗ್ಗೆ ಪಾಠ ಹೇಳಿ ಕೊಡುವುದು ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿನ ಸಮರ ಮುಂದುವರೆಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ಎಸಗಿದೆ. ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಪ್ರಸ್ತಾವನೆ ಬಂದಿರುವುದು ನಿಜ. ಆದರೆ ಅನುಮೋದಿಸಿಲ್ಲ. ಸಿದ್ದರಾಮಯ್ಯನವರಿಗೆ ಅನೋಮೊದನೆ, ಪ್ರಸ್ತಾವನೆ ಬಗ್ಗೆ ವ್ಯತ್ಯಾಸ ಗೊತ್ತಿಲ್ಲವೆಂದು ಕಿಡಿಕಾರಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅನುಮೋದನೆ, ಪ್ರಸ್ತಾವನೆ, ಖರ್ಚುವೆಚ್ಚದ ಬಗ್ಗೆ ಗೊತ್ತಿಲ್ಲದೆ 13 ಬಜೆಟ್ ಮಂಡಿಸಿದ್ದೇನೆಯೇ ಎಂದು ಪ್ರಶ್ನಿಸಿದರು. ಸುಧಾಕರ್ ಉಪಕಾರ ಸ್ಮರಣೆಯಿಲ್ಲದೆ ಮಾತನಾಡುತ್ತಿದ್ದಾರೆ. ಭಂಡತನದಿಂದ ಅಧಿಕಾರ ಅಹಂ ಅವರನ್ನು ಈ ರೀತಿ ಮಾತನಾಡಿಸುತ್ತಿದೆ ಎಂದು ಗುಡುಗಿದರು.
ನ್ಯಾಯಾಂಗ ತನಿಖೆಗೆ ಒಪ್ಪಿಸಿ:
ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅಕ್ರಮ ನಡೆಯದಿದ್ದರೆ ನ್ಯಾಯಾಂಗ ತನಿಖೆಗೆ ಒಪ್ಪಿಸಿದಾಗ ಮಾತ್ರ ಸತ್ಯಾಂಶ ಹೊರ ಬೀಳಲಿದ್ದು, ಆಗ ಜನರೇ ನಿರ್ಧಾರ ಮಾಡ್ತಾರೆ ಎಂದರು. ನಾನು ಯಾವುದೇ ನಕಲಿ ದಾಖಲೆ ಸೃಷ್ಟಿಸಿಲ್ಲ. ಕೇಂದ್ರ ಸರ್ಕಾರ ಖರೀದಿಸಿದ ವೆಂಟಿಲೇಟರ್ ಗಳು ಕಳಪೆಯಾ? ಕೇಂದ್ರ ನೀಡಿದ ವೆಂಟಿಲೇಟರ್ ಕಳಪೆ ಅಂತ ಹೇಳಲಿ ನೋಡೋಣ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಕೇಂದ್ರದವರೇ ಸುಳ್ಳು ಹೇಳಿದ್ದಾರೆ ಎಂದು ದಾಖಲೆ ನೀಡಲಿ, ಮೊದಲು ಒಂದು ಲೆಕ್ಕ ಹೇಳ್ತಾರೆ. ಈಗ ಇನ್ನೊಂದು ಲೆಕ್ಕ ಹೇಳ್ತಾರೆ ಯಾಕೆ ಈ ತರ ವ್ಯತ್ಯಾಸ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಕೌರವರು ಆಗೋಕು ಲಾಯಕ್ಕಿಲ್ಲ:
ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಯಯ್ಯ, ಮಹಾಭಾರತದ ಕೌರವ ಪಾಂಡವರ ಕಥೆ ಈಗ್ಯಾಕೆ ತಂದಿರಿ? ಸಿದ್ದರಾಮಯ್ಯ ಈಸ್ ಆಲ್ವೇಸ್ ಸಿದ್ದರಾಮಯ್ಯ. ಜನರು ಇವರನ್ನು ಪಾಂಡವರು ಅಂದುಕೊಂಡ ತಕ್ಷಣ ಇವರು ಧರ್ಮರಾಯನಾ? ಹಾಗೆಲ್ಲ ಸಾವಿರಾರು ವರ್ಷಗಳ ಹಿಂದಿನ ದ್ವಾಪರ ಯುಗವನ್ನು ಹೋಲಿಕೆ ಮಾಡಿಕೊಳ್ಳಬಾರದು. ನಾನು ಹಾಗೆಲ್ಲ ಕಂಪೇರ್ ಮಾಡಿಕೊಳ್ಳೋಕೆ ಹೋಗಲ್ಲ. ಏನಾದ್ರೂ ಸತ್ಯ, ನ್ಯಾಯ, ನೀತಿ ಇದ್ರೆ ಅದು ಮಹಾಭಾರತ ರಾಮಾಯಣದ ಪಾಠಗಳಿಂದ ಕಲಿಬೇಕಷ್ಟೆ. ನಾನು ಅಂಬೇಡ್ಕರ್, ನಾನು ಗಾಂಧಿ ಅಂತೆಲ್ಲ ಅಂದುಕೊಳ್ಳೋದಲ್ಲ. ಗಾಂಧಿ ಗಾಂಧಿಯೇ, ಅಂಬೇಡ್ಕರ್ ಅಂಬೇಡ್ಕರ್ ರೇ. ಬಿಜೆಪಿಯವರು ಕೌರವರು ಆಗುವುದಕ್ಕೂ ಲಾಯಕ್ಕಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.