ಬೆಂಗಳೂರು: ರಾಜ್ಯ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು ಕಡಿಮೆ ಮಾಡಿ ಮೀಟರ್ ಅಳವಡಿಸಲು ಹೊರಟಿರುವುದು ಮತ್ತು ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಠ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸಿರುವುದನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಅರ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಕಾಯ್ದೆ ತಂದಿದೆ. ಈ ಕಾಯ್ದೆ ಜಾರಿ ಆಗುವ ಮೊದಲೇ ರಾಜ್ಯ ಸರ್ಕಾರ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ತನ್ನು ನಿಲ್ಲಿಸಿದೆ. ಹಾಗೆಯೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಏಳಿಗೆ ಬಗ್ಗೆಯೂ ಪುಟಗಟ್ಟಲೆ ಜಾಹೀರಾತು ನೀಡಲಾಗಿತ್ತು.
ಆದರೆ, ಬಿಪಿಎಲ್ ಕಾರ್ಡ್ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಠ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಸೆಪ್ಟೆಂಬರ್ 3 ರಂದು ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ರೈತ ಮತ್ತು ದಲಿತ ಸಮುದಾಯಗಳ ವಿಚಾರದಲ್ಲಿ ಡಬ್ಬಲ್ ಎಂಜಿನ್ ಸರ್ಕಾರ ಡಬ್ಬಲ್ ದ್ರೋಹ ಎಸಗಿದೆ. ದೇಶದ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡುವುದೇ ಡಬ್ಬಲ್ ಎಂಜಿನ್ ಸರ್ಕಾರದ ಸಾಧನೆಯಾಗಿಬಿಟ್ಟಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ಜನೋದ್ಧಾರದ ಭಾಷಣ ಮಾಡಿ ಹೋದ ಬೆನ್ನಲ್ಲೇ ಸರ್ಕಾರ ಈ ಎರಡು ಜನಾದ್ರೋಹದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರ ಭಾಷಣಗಳೆಲ್ಲಾ ಪೂರ್ತಿ ಬೋಗಸ್ ಎನ್ನುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಂತಾಗಿದೆ. ಇದಕ್ಕಿಂತ ದೊಡ್ಡ ಜನದ್ರೋಹ ಮತ್ತೊಂದು ಇರಲಾರದು. ರೈತ ಸಮುದಾಯಕ್ಕೆ ಸರ್ಕಾರ ನೀಡುವ ಯಾವ ಸವಲತ್ತುಗಳು ಮತ್ತು ರಿಯಾಯಿತಿ, ವಿನಾಯಿತಿಗಳನ್ನೂ ಉಚಿತ ಎಂದು ಭಾವಿಸಲೇಬಾರದು.
‘ಸರ್ಕಾರವೇ ರೈತರ ಸಾಲಗಾರ’ ಎಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಪದೇ ಪದೇ ಹೇಳುತ್ತಿದ್ದರು. ನಾನೂ ಕೂಡ ಈ ಮಾತನ್ನು ಪೂರ್ತಿಯಾಗಿ ಸಮರ್ಥಿಸುತ್ತೇನೆ. ಹೀಗಾಗಿ ಈ ತಕ್ಷಣದಿಂದಲೇ ಸರ್ಕಾರ ತನ್ನ ಜನದ್ರೋಹಿ, ರೈತ ವಿರೋಧಿ ಕೃತ್ಯವನ್ನು ನಿಲ್ಲಿಸಬೇಕು. ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಮೊದಲಿಗಿಂತ ಹೆಚ್ಚು ಸಮರ್ಪಕವಾಗಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ರೈತ ಸಮುದಾಯದ ಹೊಟ್ಟೆಯ ಸಿಟ್ಟು ನಿಮ್ಮನ್ನು ಸುಡುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಹಾಗೆಯೇ ಪರಿಶಿಷ್ಠ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.ವಿದ್ಯುತ್ ಸೋರಿಕೆಯನ್ನು ತಡೆಗಟ್ಟಲು ಕಟ್ಟು ನಿಟ್ಟಿನ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬೃಹತ್ ಕಂಪನಿಗಳು ಉಳಿಸಿಕೊಂಡಿರುವ ದೊಡ್ಡ ಪ್ರಮಾಣದ ಬಾಕಿಯನ್ನು ವಸೂಲಿ ಮಾಡಬೇಕು. ಇಲಾಖೆಯ ಭ್ರಷ್ಟಾಚಾರವನ್ನು ಹದ್ದುಬಸ್ತಿಗೆ ತರುವ ಬಗ್ಗೆ ಹೆಚ್ಚು ಗಮನ ಕೊಡಬೇಕಾದ ಸರ್ಕಾರ ರೈತರು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯವನ್ನು ತನ್ನ ಲೋಪಗಳಿಗೆ ಹೊಣೆ ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಕ್ರಮ. ಈ ಕೂಡಲೇ ಇಂಥ ಅನಾಗರಿಕ ಧೋರಣೆಯನ್ನು ನಿಲ್ಲಿಸಿ ವಿದ್ಯುತ್ ಯೋಜನೆಯನ್ನು ಮುಂದುವರೆಸಬೇಕು ಎಂದು ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಬೇಕೆಂದ್ರಷ್ಟೇ ವಿದ್ಯುತ್ ವಿತರಣೆ ಉಚಿತ.. ಇಲ್ಲದಿರೆ ಬಿಲ್ ಬರೋದು ಖಚಿತ.. ಯೋಜನೆ ಬದಲಿಸುವತ್ತ ಕೇಜ್ರಿವಾಲ್ ಚಿತ್ತ..