ಬೆಂಗಳೂರು:ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದರು.
ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಹೋಂ ಕ್ವಾರಂಟೈನ್ನಲ್ಲಿದ್ದ ಸಿದ್ದರಾಮಯ್ಯ ಅವರು ಇಂದಿನಿಂದ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಇಂದು ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಅಕಾಲಿಕವಾಗಿ ಸತ್ಯನಾರಾಯಣ ಅವರು ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ಬಂದಿದೆ. ದಿನಾಂಕ ಯಾವ ಸಂದರ್ಭದಲ್ಲಿ ಘೋಷಣೆ ಆಗುತ್ತೊ ಗೊತ್ತಿಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ಚಿಂತಿಸುತ್ತಿದ್ದಾರೆ. ಸ್ವಾಭಾವಿಕವಾಗಿ ಕಾಂಗ್ರೆಸ್ ಅಧಿಕೃತ ಪ್ರತಿಪಕ್ಷ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಯಾವತ್ತೂ ಕೂಡ ಚುನಾವಣೆ ಎದುರಿಸಲು ಸಿದ್ಧವಿದೆ. ನಾನು ಸೋತಿದ್ದರೂ ಕೂಡ ಕ್ಷೇತ್ರ ಬಿಟ್ಟಿಲ್ಲ. ಯಾವತ್ತೂ ಜನಪರ ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದೇನೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.