ಬೆಂಗಳೂರು: ಕಾಲೇಜು ಸ್ಥಳಾಂತರ ಹಾಗೂ ಕೆಪಿಎಸ್‌ಸಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಚಿತ್ರದುರ್ಗ ಜಿಲ್ಲೆಯ ತುರುವನೂರು ಪ್ರಥಮ ದರ್ಜೆ ಕಾಲೇಜನನ್ನು, ಹಠಾತ್ತನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವ ಸರ್ಕಾರದ ನಿರ್ಧಾರ ಖಂಡನೀಯ. ನಾನು ಮುಖ್ಯಮಂತ್ರಿಯಾಗಿದ್ದಾಗ 2014ರಲ್ಲಿ ಸ್ಥಾಪನೆಯಾಗಿದ್ದ, ಈ ಕಾಲೇಜನ್ನು ಸ್ಥಳಾಂತರಗೊಳಿಸುವುದು ಕ್ಷುಲ್ಲಕ ರಾಜಕಾರಣ ಎಂದಿದ್ದಾರೆ. 2014ರಲ್ಲಿ ಸ್ಥಾಪನೆಯಾದ ಕಾಲೇಜಿನ ನೂತನ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಕ್ಕೆ ಅಣಿಯಾಗಿದ್ದಾರೆ. ಈ ಹಂತದಲ್ಲಿ ಗ್ರಾಮೀಣ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದು ದುಷ್ಟತನ. ತಕ್ಷಣ ಮುಖ್ಯಮಂತ್ರಿ ಬಿಎಸ್ ವೈ ಮಧ್ಯಪ್ರವೇಶಿಸಿ ಸ್ಥಳಾಂತರದ ಆದೇಶ ವಾಪಸ್ ಪಡೆಯಬೇಕು ಎಂದಿದ್ದಾರೆ.
ಪರೀಕ್ಷೆ ಮುಂದೂಡಲಿ:
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷ ಎಲ್ಲ ನೇಮಕಾತಿ ಹುದ್ದೆಗಳ ಭರ್ತಿಯನ್ನು ತಡೆಹಿಡಿಯಬೇಕೆಂದು ಸರ್ಕಾರದ ಸುತ್ತೋಲೆಯ ಹೊರತಾಗಿಯೂ ಕೆಪಿಎಸ್‌ಸಿ ತರಾತುರಿಯಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಹೊರಟಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯದ 6 ಜಿಲ್ಲೆಗಳಲ್ಲಿ ಮಾತ್ರ ಕೆಪಿಎಸ್‌ಸಿ ಪರೀಕ್ಷಾ ಕೇಂದ್ರಗಳಿವೆ. ಕೊರೊನಾ ಸೋಂಕಿನ ಈ ದಿನಗಳಲ್ಲಿ 30 ಜಿಲ್ಲೆಗಳ ಅಭ್ಯರ್ಥಿಗಳ ಪ್ರಯಾಣ ಮತ್ತು ವಾಸ್ತವ್ಯ ಬಹಳ ಅಪಾಯಕಾರಿ. ಈ ಎಲ್ಲ ಅಂಶಗಳನ್ನು ಗಮನಿಸಿ, ಕೆಪಿಎಸ್‌ಸಿ ನಡೆಸುವ ಆಗಸ್ಟ್ 24ರ ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಕೆಪಿಎಸ್‌ಸಿ ಪರೀಕ್ಷೆಯ ಅಭ್ಯರ್ಥಿಗಳಲ್ಲಿ ಶೇ.20 ಸರ್ಕಾರಿ ನೌಕರರಿದ್ದಾರೆ. ಇವರೆಲ್ಲ ಕಡ್ಡಾಯ ಕೊರೊನಾ ವಾರಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಇವರಲ್ಲಿ ಯಾರಿಗಾದರೂ ಕೊರೊನಾ ಸೋಂಕಿದ್ದರೆ ಉಳಿದವರಿಗೂ ಹರಡುವ ಸಾಧ್ಯತೆ ಇಲ್ಲವೇ? ಮುಖ್ಯಮಂತ್ರಿಗಳು ತಕ್ಷಣ ಗಮನ ಹರಿಸಿ ಕೆಪಿಎಸ್‌ಸಿ ಪರೀಕ್ಷೆ ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ.