ಬೆಂಗಳೂರು :ಸುಡಾನ್‌ನಲ್ಲಿ ಸೇನಾಪಡೆಗಳ ಎರಡು ಬಣಗಳ ನಡುವೆ ಉಂಟಾಗಿರುವ ಸಂಘರ್ಷದಲ್ಲಿ ರಾಜ್ಯದ 31 ಮಂದಿ ಸಿಲುಕಿದ್ದು ಕೇಂದ್ರ ಸರ್ಕಾರ ಇವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ 31 ಜನರು ಅಂತರ್ಯುದ್ಧದಿಂದ ತತ್ತರಿಸಿರುವ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ತಕ್ಷಣವೇ ಮಧ್ಯಪ್ರವೇಶಿಸಿ ಸುಡಾನ್‌ನಲ್ಲಿ ಸಿಲುಕಿರುವ ಜನರ ಸುರಕ್ಷಿತ ವಾಪಸಾತಿಗೆ ಕ್ರಮಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ವ್ಯವಹಾರಗಳ ಸಚಿವ ಅರಿಂದಮ್ ಬಾಗ್ಚಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಸುಡಾನ್‌ನಲ್ಲಿರುವ ಹಕ್ಕಿ ಪಿಕ್ಕಿ ಜನಾಂಗದವರು ಕಳೆದ ಕೆಲವು ದಿನಗಳಿಂದ ಆಹಾರವಿಲ್ಲದೇ ಸಿಲುಕಿಕೊಂಡಿದ್ದಾರೆ. ಅವರನ್ನು ಮರಳಿ ಕರೆತರಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಕೇಂದ್ರ ಬಿಜೆಪಿ ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಚರ್ಚೆಗಳನ್ನು ತೆರೆಯಬೇಕು ಮತ್ತು ಹಕ್ಕಿ ಪಿಕ್ಕಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ಏಜೆನ್ಸಿಗಳನ್ನು ಸಂಪರ್ಕಿಸಬೇಕು. ಅವರ ಪರಿಸ್ಥಿತಿ ಹೇಗಿದೆ ಎಂಬುದನ್ನು ಅರಿಯಬೇಕು ಎಂದು ಹೇಳಿದ್ದಾರೆ.
ಸುಡಾನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಒಬ್ಬ ಭಾರತೀಯ ಹಾಗೂ ಇತರ 60 ಮಂದಿಯನ್ನು ಕಳೆದುಕೊಂಡಿದ್ದೇವೆ. ಇದು ದುರದೃಷ್ಟಕರ. ಅವರ ಕುಟುಂಬಗಳಿಗೆ ನನ್ನ ಸಂತಾಪ ಮತ್ತು ಈ ಪ್ರದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.