ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಪ್ರತಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಐಟಿ, ಇಡಿ ಬಳಸಿಕೊಂಡು ಕಿರುಕುಳ ನೀಡುವ ಬಿಜೆಪಿಯ ವರ್ತನೆ ಖಂಡನೀಯ ಎಂದು ತಮ್ಮ ತಿಳಿಸಿದ್ದಾರೆ.
ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ..
ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಜೊತೆಗಿನ ಮೂರು ದಿನಗಳ ನಿರಂತರ ಚರ್ಚೆ-ಸಮಾಲೋಚನೆಗಳ ನಂತರ ರಚನೆಯಾದ ರಾಜ್ಯದ ಸಚಿವ ಸಂಪುಟವನ್ನು ನೋಡಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ. ಈಗಾಗಲೇ ಭುಗಿಲೆದ್ದಿರುವ ಭಿನ್ನಮತವನ್ನು ನೋಡಿದರೆ, ಶೀಘ್ರದಲ್ಲಿಯೇ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ದಲಿತ ಸಮುದಾಯದ ಉದ್ಧಾರಕ್ಕೆ ಅವತಾರ ಎತ್ತಿಬಂದಂತೆ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿಗಳು ರಾಜ್ಯ ಸಚಿವಸಂಪುಟ ರಚನೆಯಲ್ಲಿ ದಲಿತ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯದ ಶೇಕಡಾ 24ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ-ಪಂಗಡ ಸಮುದಾಯಕ್ಕೆ ಕೇವಲ ನಾಲ್ವರು ಸಚಿವರನ್ನು ನೀಡಿ ಅನ್ಯಾಯ ಎಸಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೊಮ್ಮಾಯಿ ಯಾರಿಗೂ ಬೇಡದ, ಒಲ್ಲದ ಕೂಸು.. ನೂತನ ಸಚಿವ ಸಂಪುಟ ರಚನೆಯಲ್ಲಿ ಬಿಜೆಪಿಯೊಳಗಿರುವ ಭಿನ್ನಮತೀಯ ಗುಂಪುಗಳನ್ನು ತೃಪ್ತಿ ಪಡಿಸುವ ಸರ್ಕಸ್ ಕಾಣುತ್ತಿದೆಯೇ ಹೊರತು, ಜನಪರವಾದ ಸಮರ್ಥ ಆಡಳಿತ ನಡೆಸಬೇಕೆಂಬ ಸದುದ್ದೇಶ ಕಾಣುತ್ತಿಲ್ಲ. ಎಲ್ಲರನ್ನೂ ಓಲೈಸಲು ಪ್ರಯತ್ನ ನಡೆಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಯಾರಿಗೂ ಬೇಡದ, ಒಲ್ಲದ ಕೂಸು ಆಗಿರುವಂತೆ ಕಾಣಿಸುತ್ತಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನೈತಿಕ ದಿವಾಳಿತನಕ್ಕೆ ಸಾಕ್ಷಿ..ಸಾಮರ್ಥ್ಯ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ, ಸ್ವಚ್ಛ ರಾಜಕಾರಣ ಮೊದಲಾದ ಯಾವ ಧನಾತ್ಮಕ ಅಂಶಗಳು ಹೊಸ ಸಚಿವ ಸಂಪುಟದಲ್ಲಿ ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ಮೊಟ್ಟೆ ಖರೀದಿ ಹಗರಣದಲ್ಲಿ ಆರೋಪಿಯಾಗಿರುವ ಶಶಿಕಲಾ ಜೊಲ್ಲೆ ಅವರಿಗೆ ಸಚಿವಸ್ಥಾನ ನೀಡಿರುವುದು ಸಿಎಂ ಮತ್ತು ಸಂಘಪರಿವಾರದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಓದಿ:'ಬಾಯಲ್ಲಿ ಭೀಮ, ಹೃದಯದಲ್ಲಿ ರಾಮ, ಕೊಳ್ಳೇಗಾಲ ಜನತೆಗೆ ಪಂಗನಾಮ'