ಬೆಂಗಳೂರು : ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನಿವಾಸಕ್ಕೆ ಪೊಲೀಸರು ವಿಚಾರಣೆಗೆ ತೆರಳಿರುವುದನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ ಎನ್ನುವುದಕ್ಕೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರಿಗೆ ನರೇಂದ್ರ ಮೋದಿ ಸರ್ಕಾರ ಪೊಲೀಸರ ಮೂಲಕ ನೀಡುತ್ತಿರುವ ಕಿರುಕುಳವೇ ಸಾಕ್ಷಿ. ಕಾಶ್ಮೀರದಲ್ಲಿ ಮಹಿಳೆಯರೆಲ್ಲರೂ ಸುರಕ್ಷಿತರಾಗಿದ್ದಾರೆಯೇ? ಅವರ ಮೇಲೆ ಯಾವುದೇ ದೌರ್ಜನ್ಯಗಳು ನಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವ ಬದಲಿಗೆ ದೂರುದಾರರ ಬೆನ್ನು ಹತ್ತಿರುವ ಸರ್ಕಾರದ ದುರುದ್ದೇಶ ಅರ್ಥವಾಗದಷ್ಟು ದೇಶದ ಜನ ಮೂರ್ಖರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಬಿಜೆಪಿ ಪಕ್ಷಕ್ಕೆ ತಿಳಿಸಿದ್ದಾರೆ. ಉದ್ಯಮಿ ಅದಾನಿ ಹಗರಣಗಳ ಬಗ್ಗೆ ದನಿ ಎತ್ತಿದ ದಿನದಿಂದ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಬೆನ್ನು ಹತ್ತಿದೆ ಎಂದರೆ ಆರೋಪದಲ್ಲಿ ಸತ್ಯ ಇದೆ ಎಂದರ್ಥ ಅಲ್ಲವೇ ಎಂದು ಹೇಳಿದ್ದಾರೆ.
ಕಳ್ಳರ ಮನಸ್ಸು ಹುಳ್ಳಗೆ. ಬಿಜೆಪಿಗೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ ಗೌರವ ಇರುವುದಾಗಿದ್ದರೆ ಮೊದಲು ತಮ್ಮ ಪಕ್ಷದಲ್ಲಿ ಮಹಿಳಾ ಪೀಡನೆಯ ಆರೋಪ ಹೊತ್ತಿರುವವರ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಿ. ಆರೋಪಿಗಳ ಪಟ್ಟಿ ಉದ್ದ ಇದೆ ಎಂದು ಅಮಿತ್ ಶಾ ಮತ್ತು ನರೇಂದ್ರ ಮೋದಿ ತಿಳಿಸಿದ್ದಾರೆ. ಭಾರತ್ ಜೋಡೊ ಯಾತ್ರೆಯ ಯಶಸ್ಸು ಆಡಳಿತಾರೂಢ ಬಿಜೆಪಿ ಪಕ್ಷದ ನಿದ್ದೆಗೆಡಿಸಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಜನಪ್ರಿಯತೆ ಅವರಲ್ಲಿ ಅಸೂಯೆ ಹುಟ್ಟಿಸಿದೆ. ಇವರಿಗೆಲ್ಲ ನನ್ನ ಸಂತಾಪಗಳು. ರಾಹುಲ್ ಗಾಂಧಿಯವರ ಹೋರಾಟ ನಿಲ್ಲದು, ಇಡೀ ದೇಶ ಅವರ ಜೊತೆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಕರಣ ಹಿನ್ನಲೆ :ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್‌ನ ಉನ್ನತ ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಹಲವು ರಾಜ್ಯಗಳನ್ನು ಹಾದು ಹೋದ ‘ಭಾರತ್ ಜೋಡೋ ಯಾತ್ರೆ’ ವೇಳೆ ರಾಹುಲ್ ಗಾಂಧಿಯವರ "ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ" ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಪೊಲೀಸರು ಅವರ ನಿವಾಸವನ್ನು ತಲುಪಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ತನ್ನನ್ನು ಸಂಪರ್ಕಿಸಿರುವ ಮಹಿಳೆಯರ ವಿವರಗಳನ್ನು ಕೇಳಿ ಪೊಲೀಸರು ಮಾರ್ಚ್ 16 ರಂದು ಕಾಂಗ್ರೆಸ್ ನಾಯಕನಿಗೆ ನೋಟಿಸ್ ನೀಡಿದ್ದರು. ಅಲ್ಲದೆ, ಕಾನೂನು ಕ್ರಮ ಕೈಗೊಳ್ಳಲು, ಆ ಮಹಿಳೆಯರ ವಿವರಗಳನ್ನು ರಾಹುಲ್ ಗಾಂಧಿಯಿಂದ ತಿಳಿದುಕೊಳ್ಳಲು ಬಯಸುವುದಾಗಿಯೂ ದೆಹಲಿ ಪೊಲೀಸರು ಹೇಳಿದ್ದಾರೆ. ವಿಶೇಷ ಪೊಲೀಸ್ ಕಮಿಷನರ್ ಮಟ್ಟದ ಅಧಿಕಾರಿಯೊಂದಿಗೆ ಉನ್ನತ ಪೊಲೀಸ್ ಅಧಿಕಾರಿಗಳು, ಸಂಬಂಧಪಟ್ಟ ಮಹಿಳೆಯರ ಬಗ್ಗೆ ಮಾಹಿತಿ ಪಡೆಯಲು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಕಾಲಾವಕಾಶ ಕೋರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ :ರಾಹುಲ್ ಗಾಂಧಿ ಇಂದು ಬೆಳಗಾವಿಗೆ: ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿ