ಬೆಂಗಳೂರು :ವಿಜಯನಗರ ಜಿಲ್ಲೆಯ ಕೂಡ್ಲಗಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಕಾರಿಗೆ ಹತ್ತುವಾಗ ಹಿಂದಕ್ಕೆ ಮುಗ್ಗರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾರಿನಿಂದ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೇನೆ ಅಷ್ಟೇ, ಗಾಬರಿ ಪಡುವಂತದ್ದೇನಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ. ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ. ಇದನ್ನು ಅತಿರಂಜಿತ ರೀತಿಯಲ್ಲಿ ವರದಿ ಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ ಎಂದಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಎನ್.ಟಿ. ಶ್ರೀನಿವಾಸ್ ಪರವಾಗಿ ಇಂದು ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭ ಸಿದ್ದರಾಮಯ್ಯ ಅವರು ಬಿಸಿಲಿನ ತಾಪಕ್ಕೆ ತಾಳಲಾರದೇ ಕುಸಿದು ಬಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಹೆಲಿಕಾಪ್ಟರ್ ಮೂಲಕ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಕಾರಿನ ಮುಂಬಾಗಿಲನ್ನು ಆಧಾರವಾಗಿಟ್ಟುಕೊಂಡು ಕಾಲಿಡುವ ಪಟ್ಟಿಯ ಮೇಲೆ ನಿಂತು ಜನರತ್ತ ಕೈಬೀಸುತ್ತಿದ್ದರು. ಬಳಿಕ ಕಾರಿನಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದು, ಈ ವೇಳೆ ಆಯತಪ್ಪಿ ಹಿಂದಕ್ಕೆ ವಾಲಿದ್ದಾರೆ. ಜತೆಗೆ ಕಾಲು ಕೊಂಚ ಜಾರಿದೆ. ಇನ್ನೇನು ಸಿದ್ದರಾಮಯ್ಯ ಬಿದ್ದರು ಅಂದುಕೊಳ್ಳುವಷ್ಟರಲ್ಲಿ ಅಲ್ಲಿಂದ ಕಾಂಗ್ರೆಸ್ ನಾಯಕರು ಮತ್ತು ರಕ್ಷಣಾ ಸಿಬ್ಬಂದಿ ಅವರನ್ನು ಹಿಡಿದು, ಕಾರಿನೊಳಗೆ ಕೂರಲು ಅನುವು ಮಾಡಿಕೊಟ್ಟಿದ್ದಾರೆ.