ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಜನ ವಿರೋಧಿ ಬಜೆಟ್ ಆಗಿದ್ದು, ಜನರಿಗೆ ಭಾರ ಹೊರಿಸಿರುವ, ಅಭಿವೃದ್ಧಿ ವಿರೋಧಿ, ಅಭಿವೃದ್ಧಿಗೆ ಮಾರಕವಾಗುವ, ಯಾವುದೆ ಹೊಸ ಭರವಸೆ ಮೂಡಿಸದ, ಜನತೆಗೆ ನಿರಾಶಾದಾಯಕ ಬಜೆಟ್ ಆಗಿದೆ. ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವ ರಿವರ್ಸ್ ಗೇರ್ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಬಜೆಟ್ ಮಂಡನೆ ನಂತರ ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ಗೆ ನಾಲ್ಕು ತಿಂಗಳ ಲೇಖಾನುದಾನ ಪಡೆದಿದ್ದೆವು. ಈಗ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಬಜೆಟ್ ಆಗಿದೆ. ಹಲವಾರು ಅಂಕಿ - ಅಂಶಗಳನ್ನು ಆಧರಿಸಿ ವಾಸ್ತವಾಂಶಕ್ಕೆ ಎಲ್ಲ ಸರ್ಕಾರಗಳು ಬಜೆಟ್ ಮಾಡಲಿವೆ. ಆದರೆ, ಇವರು ಎಲ್ಲವನ್ನೂ 2013ಕ್ಕೆ ಹೋಲಿಕೆ ಮಾಡಿದ್ದಾರೆ. ಇದು ರಿವರ್ಸ್ ಗೇರ್ ಇರುವ ಸರ್ಕಾರ, ನಾವು ಹಿಂದೆ ಹೋಗಬೇಕಾ ಮುಂದೆ ಹೋಗಬೇಕಾ? ಎಂದು ಪ್ರಶ್ನಿಸಿದರು.
ಇದು ಸುಳ್ಳು ಹೇಳುವ ಸರ್ಕಾರ :ಗ್ಯಾರಂಟಿಗಳ ಬಗ್ಗೆ ಚುನಾವಣೆಗೂ ಮೊದಲು ಘೋಷಣೆ ಮಾಡಿರುವುದಕ್ಕೂ, ರಾಜ್ಯಪಾಲರ ಭಾಷಣ ಮತ್ತು ಬಜೆಟ್ ನಲ್ಲಿ ಹೇಳಿರುವುದನ್ನು ನೋಡಿದರೆ ಇದು ಸುಳ್ಳು ಹೇಳುವ ಸರ್ಕಾರ ಎಂದು ತಿಳಿಯಲಿದೆ. ದೇಶದಲ್ಲೇ ರಾಜ್ಯದಲ್ಲಿ ಕೋವಿಡ್ ಅತ್ಯುತ್ತಮ ನಿರ್ವಹಣೆಯಾಗಿದೆ. ಅಂದು ನಾವು ತೆರಿಗೆ ವಿನಾಯಿತಿ, ಪರಿಹಾರ ಎಲ್ಲ ಮಾಡಿದ್ದರೂ ಅಂದಿನ ಆರ್ಥಿಕ ನಿರ್ವಹಣೆ ಸರಿಯಿಲ್ಲ ಎನ್ನುತ್ತಿದ್ದಾರೆ. ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ಆರ್ಥಿಕ ನಿರ್ವಹಣೆ, ಸ್ಥಿತಿ ಕುರಿತು ವರದಿ ಇದೆ ನೋಡಿ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಕೇಂದ್ರದ ಯೋಜನೆಗಳಿಗೆ ಹಣ ಕಡಿಮೆ ಮಾಡಿದ್ದಾರೆ ಎಂದು ಇವರು ಆರೋಪ ಮಾಡಿದ್ದಾರೆ. ಕೆಲ ಯೋಜನೆಗೆ ಅನುದಾನ ಕೊಡಲಿದೆ. ಕೆಲ ಯೋಜನೆಗೆ ಫಲಾನುಭವಿ ಖಾತೆಗೆ ಹಣ ಬರಲಿದೆ. ಆದರೆ ತಪ್ಪು ಮಾಹಿತಿ ನೀಡಿದ್ದಾರೆ. ಇದಕ್ಕೆ ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರಿಸುತ್ತೇವೆ ಎಂದರು.
ಬಜೆಟ್ನಲ್ಲಿ 50 ಪ್ಯಾರಾಗೂ ಹೆಚ್ಚು ಬರೀ ಟೀಕೆ ಮಾಡುವುದಕ್ಕೇ ಮೀಸಲಿಟ್ಟಿದ್ದಾರೆ. ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಬೇಕು ಎಂದಿದ್ದಾರೆ. ಆದರೆ, ಫ್ರೀ ಬಸ್ ಯೋಜನೆ ಮಾತ್ರ ಜಾರಿಯಾಗಿದೆ. ಉಳಿದವು ಇನ್ನು ಜಾರಿ ಆಗಿಲ್ಲ. ಅಲ್ಲದೇ ಅವರು ಹಾಕಿರುವ ಷರತ್ತು ನೋಡಿದರೆ 20-25 ಸಾವಿರ ಕೋಟಿ ಮಾತ್ರ ಸಾಕಾಗಲಿದೆ. ಹಾಗಾಗಿ ಅವರು ಹೆಚ್ಚಿನ ತೆರಿಗೆ ಹಾಕಬೇಕಾದ ಹೆಚ್ಚಿನ ಸಾಲ ಮಾಡಬೇಕಾದ ಅಗತ್ಯ ಇರಲಿಲ್ಲ ಎಂದರು.
ವಿತ್ತೀಯ ಕೊರತೆಯ ಬಜೆಟ್ ಮಂಡನೆ :ಬಜೆಟ್ನಲ್ಲಿತೆರಿಗೆ ಹೆಚ್ಚಳ ಮಾಡಲಾಗಿದ್ದು, ಮೋಟಾರ್ ವೆಹಿಕಲ್ ತೆರಿಗೆ, ನೋಂದಣಿ ಮುದ್ರಾಂಕ ತೆರಿಗೆ ಹೆಚ್ಚಿಸಿದ್ದಾರೆ. ಈ ಬಜೆಟ್ ಸಾಮಾನ್ಯ ಜನರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. 75 ಸಾವಿರ ಕೋಟಿ ಇದ್ದ ಬಜೆಟ್ನ್ನು 83 ಸಾವಿರ ಕೋಟಿಗೆ ಹೆಚ್ಚಿಸಿದ್ದಾರೆ. ಸುಮಾರು 3.27 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ನಾನು ಉಳಿತಾಯ ಬಜೆಟ್ ಮಂಡಿಸಿದ್ದೆ. ಆದರೆ ಅವರು ವಿತ್ತೀಯ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಸರಿಯಾದ ನಿರ್ದೇಶನವಿಲ್ಲದೆ ಬಜೆಟ್ ಮಂಡಿಸಿದ್ದಾರೆ ಎಂದು ಟೀಕಿಸಿದರು.