ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದ ಸಮಾರಂಭವೊಂದರಲ್ಲಿ ಮತ್ತೊಮ್ಮೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು ಕೇಳಿಬಂದಿದೆ.
ಹೆಬ್ಬಾಳ ಕ್ಷೇತ್ರದ ವಿ ನಾಗೇನಹಳ್ಳಿ ಕ್ಷೇತ್ರದಲ್ಲಿ ಶಾಸಕ ಭೈರತಿ ಸುರೇಶ್ ನೇತೃತ್ವದಲ್ಲಿ ಕನಕದಾಸ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಇವರನ್ನು ಟ್ರ್ಯಾಕ್ಟರ್ ರ್ಯಾಲಿ ಮೂಲಕ ಸ್ವಾಗತಿಸಲಾಯಿತು. ಟ್ರ್ಯಾಕ್ಟರ್ ಗಳಿಗೆ ಸಿಂಗಾರ ಮಾಡಿ ಮೆರವಣಿಗೆ ಮಾಡಲಾಯಿತು.
ಮುಂದಿನ ಸಿಎಂ ಸಿದ್ದರಾಮಯ್ಯ: ಹೆಬ್ಬಾಳ ಕಾರ್ಯಕ್ರಮದಲ್ಲಿ ಮತ್ತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆ ಕೇಳಿಬಂತು. ಸ್ವಾಗತ ಭಾಷಣ ಮಾಡುವಾಗಲೂ ಮುಂದಿನ ಮುಖ್ಯಮಂತ್ರಿ ಬಗ್ಗೆ ಉಲ್ಲೇಖವಾಯಿತು.
ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ ಮೊದಲು ಮನುಷ್ಯರು : ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನಕದಾಸರ ಬಗ್ಗೆ ನೀವು ತಿಳಿದುಕೊಂಡಿದ್ದೀರಿ ಎಂಬುದು ನನ್ನ ಭಾವನೆ. ಕನಕದಾಸ, ಸೇರಿದಂತೆ ಅನೇಕ ಜಯಂತಿ ಆಚರಣೆ ಮಾಡ್ತೇವೆ. ಕೆಂಪೇಗೌಡರ ಜಯಂತಿ ಆಚರಣೆ ಮಾಡಿದ್ದೇವೆ. ಜಾತ್ಯಾತೀತರು ಎಂದು ಮಹಾತ್ಮರನ್ನು ಕರೆಯುತ್ತೇವೆ. ದೇಶದಲ್ಲಿ ಅನೇಕ ಜಾತಿ, ಧರ್ಮಗಳು ಇದಾವೆ. ನಾವು ಯಾವುದೇ ಧರ್ಮ, ಜಾತಿಗೆ ಸೇರಿದರೂ ಮೊದಲು ಮನುಷ್ಯರು ಎಂದು ಹೇಳಿದರು.
ಇಂಗ್ಲೆಂಡ್, ಅಮೆರಿಕದವರ ರಕ್ತ ಬೇರೆ ಇರಲ್ಲ. ನಮ್ಮ ಸ್ವಾರ್ಥಕ್ಕೆ ಜಾತಿ, ಧರ್ಮ ಮಾಡಿಕೊಂಡಿದ್ದೇವೆ. ನಿನ್ನೆ ಸಂವಿಧಾನದ ದಿನಾಚರಣೆ ಮಾಡಿದ್ದೇವೆ. ಸಂವಿಧಾನದ ಬರುವ ಮುನ್ನ ಸಮಾನ ಅವಕಾಶ ಕೊಡುವ ವ್ಯವಸ್ಥೆ ಇರಲಿಲ್ಲ. ಸಂವಿಧಾನದ ಬಂದ ಮೇಲೆ ಸಮಾನರು. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮತದಾನದ ಹಕ್ಕು ಕೊಟ್ಟಿದ್ದಾರೆ. ಪ್ರೆಸಿಡೆಂಟ್ ಆಗಲಿ, ಯಾರೇ ಆಗಲಿ ಒಂದು ವೋಟ್ ಗೆ ಒಂದೇ ಬೆಲೆ. ಕನಕ, ಬಸವ, ಬುದ್ಧ ಏನು ಹೇಳಿದ್ದರು ಎಂಬುದರ ಆಧಾರದ ಮೇಲೆ ಸಂವಿಧಾನ ರಚನೆ ಆಗಿದೆ ಎಂದರು.
ಇವನಾರವ, ಇವನಾರವ ಎಂದು ಬಸವಣ್ಣ ಹೇಳಿದ್ರು. ಕುಲ ಕುಲ ಎಂದು ಬಡಿದಾಡದೀರಿ ಎಂದು ಕನಕದಾಸರ ಹೇಳಿದ್ರು. ನನಗೆ ರಕ್ತ ಬೇಕಾದಾಗ ಕುರುಬರ ರಕ್ತವೇ ಬೇಕು ಎಂದು ಕೇಳ್ತೇವಾ? ಇದೇ ಜಾತಿ ರಕ್ತ ಬೇಕು ಎಂದು ಕೇಳಲು ಆಗುತ್ತಾ? ರಕ್ತ ಸಿಕ್ಕ ಮೇಲೆ ನಾನು ಕುರುಬ, ನೀನು ಒಕ್ಕಲಿಗ ಎನ್ನುತ್ತೇವೆ ಎಂದರು.
ಬೊಮ್ಮಾಯಿ ಮಹಾರಾಷ್ಟ್ರ ಸಿಎಂ ಜೊತೆ ಮಾತನಾಡಲಿ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದಕ್ಕೆ ಸರ್ವಪಕ್ಷ ಸಭೆ ವಿಚಾರವಾಗಿ ಕಾರ್ಯಕ್ರಮಕ್ಕೆ ಮುನ್ನ ಮಾತನಾಡಿದ ಸಿದ್ದರಾಮಯ್ಯ, ಇದೊಂದು ಗಡಿ ವಿಚಾರ, ಸರ್ವ ಪಕ್ಷಗಳ ಸಭೆ ಕರೆಯಲಿ. ಗಡಿ ವಿವಾದಕ್ಕೆ ಒಳ್ಳೆಯ ಲಾಯರ್ ಇಟ್ಟು ನಡೆಸಬೇಕು. ಮಹಾರಾಷ್ಟ್ರ ಕೇಸ್ ಮೆಂಟನೇಬಲ್ ಅಲ್ಲ. ನಿವೃತ್ತ ಜಡ್ಜ್ ಮಂಜುನಾಥ್ ನಿಧನರಾಗಿ ಹತ್ತು ತಿಂಗಳು ಕಳೆಯಿತು. ಇಲ್ಲಿಯವರೆಗೆ ಗಡಿ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. ಈಗ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ನೇಮಕ ಮಾಡಿದ್ದಾರೆ. ಸರ್ವಪಕ್ಷ ಸಭೆ ಕರೆಯಲಿ ನಾನು ಹೇಳುತ್ತೇನೆ. ಮಹಾರಾಷ್ಟ್ರದ ಉದ್ಧಟತನ ನಿಲ್ಲಿಸಬೇಕು. ಎರಡು ಕಡೆ ಬಿಜೆಪಿ ಸರ್ಕಾರ ಇದೆ. ಮೊದಲು ಮಹಾರಾಷ್ಟ್ರ ಪುಂಡಾಟ ನಿಲ್ಲಿಸುವ ಕೆಲಸ ಮಾಡಲಿ. ಬೊಮ್ಮಾಯಿ ಮಹಾರಾಷ್ಟ್ರ ಸಿಎಂ ಜೊತೆ ಮಾತನಾಡಬೇಕು. ಪುಂಡಾಟ ಮಾಡದಂತೆ ತಡೆಯಬೇಕು ಎಂದು ಸಿಎಂಗೆ ಒತ್ತಾಯ ಮಾಡಿದರು.
ಇದನ್ನೂ ಓದಿ :ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ : ವಿ ಎಸ್ ಉಗ್ರಪ್ಪ