ಕರ್ನಾಟಕ

karnataka

ETV Bharat / state

ಮೋದಿ ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ: ಸಿದ್ದರಾಮಯ್ಯ - ಬೆಂಗಳೂರಿನಲ್ಲಿ ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆ

ರಾಜ್ಯದಲ್ಲಿ ಭ್ರಷ್ಟ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಹೋಗಿ ಇನ್ನೊಬ್ಬರು ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಾರಣ ಬೊಮ್ಮಾಯಿಯವರು ಯಡಿಯೂರಪ್ಪ ಅವರ ರಬ್ಬರ್ ಸ್ಟ್ಯಾಂಪ್​ನಂತೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇದೇ ವೇಳೆ ಪ್ರಧಾನಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

Siddaramaiah
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

By

Published : Aug 9, 2021, 3:39 PM IST

ಬೆಂಗಳೂರು: ದೇಶವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಮೋದಿ ಅಧಿಕಾರ ನೀಡಿ ಎಂದು ಜನತೆಗೆ ಮನವಿ ಮಾಡಿದ್ದರು. ಆದರೆ, ಅಧಿಕಾರ ಕೊಟ್ಟವರಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೋದಿ ಅವರು 2014 ರಲ್ಲಿ ಕಾಂಗ್ರೆಸ್ ಗೆ 60 ವರ್ಷ ಅಧಿಕಾರ ನೀಡಿದ್ದೀರಿ, ನಮಗೆ 60 ತಿಂಗಳು ಅಧಿಕಾರ ಕೊಡಿ ದೇಶದ ಸಾಮಾಜಿಕ, ಆರ್ಥಿಕ ಚಿತ್ರಣವನ್ನು ಬದಲಾವಣೆ ಮಾಡುತ್ತೇವೆ ಎಂದು ದೇಶದ ಜನರಿಗೆ ಮಾತು ಕೊಟ್ಟಿದ್ದರು. ಇಂದು ಬದಲಾವಣೆ ಆಗಿರುವುದಂತೂ ನಿಜ. ಆದರೆ, ಅವರು ಯಾವ ರೀತಿಯ ಬದಲಾವಣೆ ಹೇಳಿದ್ದರೋ ಅದಕ್ಕೆ ವಿರುದ್ಧವಾಗಿ ಅಧಿಕಾರ ನಡೆಸಿದ್ದಾರೆ ಎಂದರು.

ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆ ಸಮಾರಂಭ

ಮೋದಿಯವರ ಏಳು ವರ್ಷಗಳ ಆಡಳಿತದಲ್ಲಿ ಸಾಮಾನ್ಯ ಜನ ಬಡತನ ರೇಖೆಗಿಂತ ಮೇಲೆ ಹೋಗಬೇಕಿತ್ತು. ಆದರೆ, 23% ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. 12 ಕೋಟಿ ಉದ್ಯೋಗ ನಷ್ಟವಾಗಿದೆ. ದೇಶದ ಜಿ.ಡಿ.ಪಿ 7.7 ಕ್ಕೆ ಬಂದಿದೆ. ಇದು ದೇಶಕ್ಕೆ ಮೋದಿಯವರ ಕೊಡುಗೆ. ಜನರ ಜೀವನ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿದೆ. ಇವರ ಒಟ್ಟು ಸಾಧನೆ ಸುಳ್ಳು ಹೇಳಿರುವುದೊಂದೇ ಎಂದು ವಾಗ್ದಾಳಿ ನಡೆಸಿದರು.

ಇಷ್ಟು ಸುಳ್ಳು ಹೇಳಿದ ಪ್ರಧಾನಿ ಇನ್ನೊಬ್ಬರಿಲ್ಲ..

ಸ್ವಾತಂತ್ರ್ಯ ಭಾರತದಲ್ಲಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ. ಸಾವರ್ಕರ್​ಯಿಂದ ಹಿಡಿದು ಭಾರತೀಯ ಜನತಾ ಪಕ್ಷದ ಯಾವೊಬ್ಬ ನಾಯಕನೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ. ತ್ಯಾಗ ಬಲಿದಾನಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ತೊರೆದು ಹೋದವರು ಸೈದ್ಧಾಂತಿಕ ಬದ್ಧತೆಯಿಲ್ಲದವರು ಎಂದು ಸಿದ್ದರಾಮಯ್ಯ ಜರಿದರು.

ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯವರು ಸಮಾನತೆಯ ವಿರೋಧಿಗಳು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಆಶಯಗಳಾದ ಸಾಮಾಜಿಕ ಬದಲಾವಣೆ, ಸಮಾನ ಅವಕಾಶಗಳು, ಎಲ್ಲಾ ವರ್ಗದ ಜನರನ್ನು ಮುಖ್ಯವಾಹಿನಿಗೆ ತರುವ, ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಬಿಜೆಪಿಗೆ ನಂಬಿಕೆಯಿಲ್ಲ. ಬಿಜೆಪಿ ನಂಬಿಕೆ ಹೊಂದಿರುವುದು ಚತುರ್ವಣ ವ್ಯವಸ್ಥೆಯ ಬಗ್ಗೆ. ಈ ಕಾರಣಕ್ಕಾಗಿ ಸಮಾಜವನ್ನು ಒಡೆದು, ಅದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತದೆ ಎಂದು ಕಿಡಿಕಾರಿದರು.

ಟಿಪ್ಪು ಜಯಂತಿ ಪ್ರಸ್ತಾಪ..

ನಮ್ಮ‌ ಸರ್ಕಾರದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದ್ದೆವು. ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನವರು ಹಿಂದುವಲ್ಲವೇ? ಹಣಕಾಸು ಮಂತ್ರಿಯಾಗಿದ್ದ ಕೃಷ್ಣಸ್ವಾಮಿ ಹಿಂದುವಲ್ಲವೇ? ಮೊಘಲರ ಆಳ್ವಿಕೆಯಲ್ಲಿ ಅವರ ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿದ್ದ ಜನರೇ ಇಂದು ಆರ್.ಎಸ್.ಎಸ್ ನ ನಾಯಕರಾಗಿದ್ದಾರೆ. ಈಗ ಇವರು ಭಾರತೀಯತೆ, ದೇಶಭಕ್ತಿಯ ಪಾಠ ಮಾಡುತ್ತಾರೆ. ಟಿಪ್ಪು ಜಯಂತಿ ಆಚರಿಸಿದ ಕಾರಣಕ್ಕೆ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಮಾಡಿದ ದೇಶದ್ರೋಹ ಏನು? ಬ್ರಿಟಿಷರ ವಿರುದ್ಧ ಹೈದರಾಲಿ ಮತ್ತು ಟಿಪ್ಪು ನಾಲ್ಕು ಮಹಾಯುದ್ಧಗಳನ್ನು ಮಾಡಿದ್ದರು. ಬ್ರಿಟಿಷರನ್ನು ದೇಶದಿಂದ ಹೊರಹಾಕುವ ಪ್ರಯತ್ನ ಮಾಡಿದ್ದರು. ಇಂತಹ ಟಿಪ್ಪುವಿನ ಜಯಂತಿ ಮಾಡಿದರೆ ಬಿಜೆಪಿಯವರಿಗೆ ಕೋಪ ಬರುತ್ತೆ. ಟಿಪ್ಪು ಮೇಲಿರುವ ಕೋಪ ಪೂರ್ಣಯ್ಯನ ಮೇಲೆ ಏಕಿಲ್ಲ? ಇಂಥವರು ದೇಶಕಟ್ಟುತ್ತಾರಾ? ದೇಶದ ಸಂಪತ್ತನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಭಾರತ ಬಡ ದೇಶವಾಯಿತು: ಈಸ್ಟ್ ಇಂಡಿಯಾ ಕಂಪನಿ ನಮ್ಮ ದೇಶವನ್ನು ಲೂಟಿ ಮಾಡಿತು. ನಮ್ಮ ದೇಶಕ್ಕೆ ಬರುವ ಮುಂಚೆ ಜಗತ್ತಿನ ಜಿ.ಡಿ.ಪಿ ಗೆ ಬ್ರಿಟಿಷರ ಕೊಡುಗೆ ಶೇ.2 ಇತ್ತು. ನಮ್ಮ ದೇಶದಿಂದ ಅವರು ಹೊರಹೋಗುವಾಗ ಶೇ.10ಕ್ಕೆ ಏರಿತ್ತು. ನಮ್ಮ ದೇಶ ಹಿಂದೆಯೇ ಸಮೃದ್ಧವಾಗಿತ್ತು. ದೇಶದ ಜಿ.ಡಿ.ಪಿ ಶೇ.23 ಇತ್ತು. ಬ್ರಿಟಿಷರು ಕೊಳ್ಳೆ ಹೊಡೆದ ಪರಿಣಾಮ ಭಾರತ ಬಡ ದೇಶವಾಯಿತು.

ಇವತ್ತು ಮತ್ತೆ ಭಾರತ ಬಡ ದೇಶವಾಗುತ್ತಿದ್ದರೆ ಅದಕ್ಕೆ ಕಾರಣ ಬಿಜೆಪಿಗರು. ಹಿಂದೆ ಬ್ರಿಟಿಷರ ವಿರುದ್ಧ ಮಾಡಿದ ಹೋರಾಟದ ಮಾದರಿಯಲ್ಲೇ ಈಗ ಮತ್ತೆ ಹೋರಾಟ ಮಾಡಬೇಕಿದೆ. ಕ್ವಿಟ್ ಇಂಡಿಯಾ ಚಳವಳಿ ದಿನ, ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಮುಂತಾದ ಪ್ರಮುಖ ದಿನಗಳಂದು ನಾವೆಲ್ಲ ತ್ಯಾಗ ಬಲಿದಾನದ ಮನಸ್ಥಿತಿ ಬೆಳೆಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಾಗುತ್ತದೆ. ಜೊತೆಗೆ ಬಿಜೆಪಿಯನ್ನು ತೊಲಗಿಸುವ ಕೆಲಸಕ್ಕೆ ಒಂದಾಗಿ ಕೆಲಸ ಮಾಡಬೇಕು ಎಂದರು.

ನಿರೀಕ್ಷೆ ಅಸಾಧ್ಯ..

ರಾಜ್ಯದಲ್ಲಿ ಭ್ರಷ್ಟ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಹೋಗಿ ಇನ್ನೊಬ್ಬರು ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಾರಣ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ರಬ್ಬರ್ ಸ್ಟ್ಯಾಂಪ್ ನಂತೆ. ಈಗ ಕಾಲ ಕೂಡಿ ಬರುತ್ತಿದೆ. ವ್ಯವಸ್ಥೆ ಹದಗೊಳ್ಳುತ್ತಿದೆ. ನಾವೆಲ್ಲಾ ಹೋರಾಟದ ಮನೋಭಾವದಿಂದ, ಒಟ್ಟಾಗಿ ಬಿಜೆಪಿಯನ್ನು ತೊಲಗಿಸಲು ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ದೇಶದಲ್ಲಿ ಎಲ್ಲಾ ಪ್ರತಿಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ ಎಂಬುದು ನನ್ನ ಭಾವನೆ. ಕರ್ನಾಟಕದಲ್ಲಿ ಕೂಡ ಬಿಜೆಪಿಯನ್ನು ತೊಲಗಿಸಲು ಸ್ವತಂತ್ರವಾಗಿ ಪ್ರಯತ್ನಿಸೋಣ. ಈ ದಿನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನೂ ಸ್ಮರಿಸುತ್ತಾ, ಅವರ ತ್ಯಾಗ, ಬಲಿದಾನಗಳನ್ನು ನಮ್ಮ ಹೋರಾಟಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ ಎಂದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್‌, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತಿತರರು ಹಾಜರಿದ್ದರು.

ಓದಿ:ಸಚಿವ ಸ್ಥಾನ ಸಿಕ್ಕಿರುವುದು ಸನ್ಮಾನ ಸ್ವೀಕರಿಸಲು ಅಲ್ಲ, ಜನ ಸೇವೆ ಮಾಡಲು: ಹೆಚ್​ಡಿಕೆ

ABOUT THE AUTHOR

...view details