ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ವಿಧಾನಸಭೆ ಕಲಾಪ ಮುಗಿದ ಕೂಡಲೇ ಪದ್ಮನಾಭ ನಗರದ ನಿವಾಸಕ್ಕೆ ತೆರಳಿ ಸಿದ್ದರಾಮಯ್ಯ ಅವರು ದೇವೇಗೌಡರನ್ನು ಭೇಟಿಯಾದರು. ಕೆಲ ಕಾಲ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ ದೇವೇಗೌಡರನ್ನ ಕಾಡುತ್ತಿರುವ ಕಾಲು ನೋವಿನ ವಿಚಾರವಾಗಿ ಮಾಹಿತಿ ಪಡೆದರು.
ಎರಡು ದಿನಗಳ ಹಿಂದಷ್ಟೇ ಸಚಿವ ಆರ್. ಅಶೋಕ್ ಕೂಡ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ವಾಪಸ್ ಆಗಿದ್ದರು. ಇದೀಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಜನತಾ ಪರಿವಾರದ ಮೂಲಕ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ನಾಯಕರು ಈ ಹಿಂದೆ ಒಂದೇ ಪಕ್ಷದಲ್ಲಿ ಸಾಕಷ್ಟು ವರ್ಷ ಕಾರ್ಯ ನಿರ್ವಹಿಸಿದ್ದು, ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರ ಅವಧಿಯನ್ನು ಪೂರೈಸಿದ್ದು ಇತಿಹಾಸ.
ರಾಜಕೀಯವಾಗಿ ಸಾಕಷ್ಟು ವಿಭಿನ್ನ ಅಭಿಪ್ರಾಯವನ್ನು ಹೊಂದಿರುವ ಉಭಯ ನಾಯಕರು ವೈಯಕ್ತಿಕವಾಗಿ ಸಾಕಷ್ಟು ಆತ್ಮೀಯತೆಯನ್ನು ಹೊಂದಿದ್ದಾರೆ. ಜೆಡಿಎಸ್ ಪಕ್ಷವನ್ನು ಸಿದ್ದರಾಮಯ್ಯ ತೊರೆದ ಬಳಿಕ ಇಬ್ಬರು ಭೇಟಿಯಾಗಿದ್ದು ತುಂಬಾ ವಿರಳ. ರಾಜ್ಯಸಭೆ ಸದಸ್ಯರಾಗಿರುವ ದೇವೇಗೌಡರು ಕಳೆದ ಕೆಲ ದಿನಗಳಿಂದ ಕಾಲು ನೋವಿನ ಹಿನ್ನೆಲೆ ಬೆಂಗಳೂರಿನ ನಿವಾಸದಲ್ಲಿಯೇ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಇಂದು ಅವರನ್ನ ಭೇಟಿ ಮಾಡಿದ ಸಿದ್ದರಾಮಯ್ಯ ತಮ್ಮ ಹಳೆಯ ನೆನಪು ಹಾಗು ಅನುಭವಗಳನ್ನು ಮೆಲುಕು ಹಾಕಿದ್ದಾರೆ.
ಆರು ವರ್ಷದ ನಂತರ ಭೇಟಿ..ದೇವೇಗೌಡರ ಭೇಟಿಯ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, 2016ರಲ್ಲಿ ಕಡೆಯ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿಯಾಗಿದ್ದೆ. ಮುಖ್ಯಮಂತ್ರಿ ಆಗಿದ್ದ ನಾನು ಕಾವೇರಿ ನೀರಾವರಿ ವಿಚಾರವಾಗಿ ಚರ್ಚಿಸಲು ದೇವೇಗೌಡರನ್ನ ಅವರ ನಿವಾಸದಲ್ಲಿ ಭೇಟಿಯಾಗಿದ್ದೆ. ಇದೀಗ ಅವರ ಆರೋಗ್ಯ ಅಷ್ಟಾಗಿ ಚೆನ್ನಾಗಿಲ್ಲ ಎಂದು ಹೇಳಿದರು.