ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ನ್ಯಾ ನಾಗಮೋಹನದಾಸ್ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಹೆಚ್ಚಿಸಬೇಕೆಂದು ಇಂದಿನ ಸರ್ವಪಕ್ಷಗಳ ಸಭೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಕಚೇರಿ ಕೃಷ್ಣಾದಲ್ಲಿ ಇಂದು ಕರೆದಿದ್ದ ಸರ್ವಪಕ್ಷ ಸಭೆ ಮುಗಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ತಕ್ಷಣ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಎಸ್.ಸಿ /ಎಸ್.ಟಿ ಮೀಸಲಾತಿ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ನಮ್ಮ ಸರ್ಕಾರ ಇದ್ದಾಗ ರಚನೆಯಾಗಿದ್ದ ನಾಗಮೋಹನ್ ದಾಸ್ ಅವರ ಸಮಿತಿ 7-2-2020ರಲ್ಲಿ ವರದಿಯನ್ನು ನೀಡಿದೆ. ಈ ವರದಿ ನೀಡಿ ಎರಡು ವರ್ಷ ಮೂರು ತಿಂಗಳು ಕಳೆದಿದೆ. ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಧರಣಿ ಆರಂಭ ಮಾಡಿ 240 ದಿನಗಳಾಗಿದೆ ಎಂದರು.
ಎಸ್.ಸಿ ಜನಾಂಗದ ಜನಸಂಖ್ಯೆಯಲ್ಲಿ ಏರಿಕೆ ಆಗಿದೆ. ಮೊದಲು ಎಸ್.ಸಿ ಜನಾಂಗದಲ್ಲಿ 6 ಜಾತಿಗಳು ಇದ್ದವು. ಈಗ ಅದು 102 ಆಗಿದೆ. ಎಸ್.ಟಿ ಯಲ್ಲೂ 6 ಜಾತಿಗಳಿತ್ತು. ಅವು 52ಕ್ಕೆ ಏರಿದೆ. ಈಗ ಎಸ್ಸಿಗಳಿಗೆ ಶೇ15 ಹಾಗೂ ಎಸ್ಟಿಗಳಿಗೆ ಶೇ 3ರಷ್ಟು ಮೀಸಲಾತಿ ಇದೆ. ನಾಗಮೋಹನ್ ದಾಸ್ ಅವರ ವರದಿ ಎಸ್.ಸಿ ಮೀಸಲಾತಿಯನ್ನು 15ರಿಂದ 17ಕ್ಕೆ ಏರಿಕೆ ಮಾಡಬೇಕು ಹಾಗೂ ಎಸ್.ಟಿ ಗಳಿಗೆ 3 ರಿಂದ 7ಕ್ಕೆ ಮೀಸಲಾತಿ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಿದೆ.
2011ರ ಜನಗಣತಿ ಪ್ರಕಾರ ಎಸ್. ಸಿ ಜನಸಂಖ್ಯೆ 17.15% ಇದೆ. ಎಸ್. ಟಿ 6.95% ಇತ್ತು. ಈಗ ಇದು ಇನ್ನೂ ಜಾಸ್ತಿಯಾಗಿದೆ. ಇದನ್ನು ನಾಗಮೋಹನ್ ದಾಸ್ ಸಮಿತಿ ಆಧಾರವಾಗಿಟ್ಟುಕೊಂಡು ಮೀಸಲಾತಿ ಹೆಚ್ಚಿಸುವಂತೆ ಶಿಫಾರಸು ಮಾಡಿದೆ ಎಂದರು. ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳವಾಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮಾತ್ರ ಅವಕಾಶ ಇದೆ ಎಂದು ಹೇಳಿದರು.
ನ್ಯಾಯಾಲಯದಲ್ಲಿಯೂ ಪ್ರಶ್ನಿಸುವಂತಿಲ್ಲ: ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿಯ ಮೂಲಕ ಮೀಸಲಾತಿಯನ್ನು ಹೆಚ್ಚಿಸಿ ಅದನ್ನು ಸಂವಿಧಾನದ 9ನೇ ಶೆಡ್ಯೂಲ್ನಲ್ಲಿ ಸೇರಿಸಿದರೆ ನ್ಯಾಯಾಲಯದಲ್ಲಿಯೂ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಈ ಕೆಲಸವನ್ನು ಮೊದಲು ಕೇಂದ್ರ ಸರ್ಕಾರ ಮಾಡಬೇಕು. ಇದನ್ನೆ ನ್ಯಾಯಮೂರ್ತಿ ನಾಗಮೋಹನದಾಸ ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿಸಿದರು.