ಬೆಂಗಳೂರು:ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರ ಹೋರಾಟ ಕಾಂಗ್ರೆಸ್ ಪ್ರೇರಿತ ಬಂದ್ ಅಲ್ಲ. ಕಾಂಗ್ರೆಸ್ ಪರ ಹೋರಾಟವೂ ಅಲ್ಲ. ರೈತ ವಿರೋಧಿ ಕಾನೂನುಗಳನ್ನ ವಾಪಸ್ ತೆಗೆದುಕೊಳ್ಳಿ ಎಂದು ಪ್ರತಿಭಟನೆ ಮಾಡ್ತಿದ್ದಾರೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರೈತರು ಈ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ. ರೈತ ಮಾರಕ ಕಾನೂನು ತಂದಿರುವುದರಿಂದ ವಾಪಸ್ ತೆಗೆದುಕೊಳ್ಳಿ ಎಂದು ಚಳವಳಿ ಮಾಡುತ್ತಿದ್ದಾರೆ. ನಾವು ರೈತ ಪರ ಇರುವ ಪಕ್ಷ ಆಗಿರುವುದರಿಂದ ನಾವು ಬೆಂಬಲ ನೀಡುತ್ತೇವೆ ಎಂದು ವಿವರಿಸಿದರು.
ಇನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ರೈತರು ಕರೆ ಕೊಟ್ಟಿರುವ ಬಂದ್ಗೆ ನಮ್ಮ ಬೆಂಬಲ ಇದೆ. ಈ ಮೂರು ಕಾಯ್ದೆಗಳು ರೈತರ ಮರಣ ಶಾಸನ ಕಾಯ್ದೆಯಾಗಿವೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಈ ಕಾಯ್ದೆಗಳು ರೈತರ ಆದಾಯ ಕಡಿತ ಮಾಡುವ ಕಾನೂನುಗಳು. ಹೋರಾಟ ಯಶಸ್ವಿಯಾಗುತ್ತದೆ. ಕಾಂಗ್ರೆಸ್ ಪಕ್ಷ ಸದಾ ರೈತರ ಹೋರಾಟಕ್ಕೆ ಬೆನ್ನೆಲುಬಾಗಿ ಇರಲಿದೆ ಎಂದರು.
ಬೆಲೆ ಏರಿಕೆ ವಿರುದ್ಧ, ರೈತರ ಸಮಸ್ಯೆ ವಿರುದ್ಧ ನಾವು ಸದಾ ದನಿ ಎತ್ತಿದ್ದೇವೆ. ದೇಶದ ಬೆನ್ನೆಲುಬಾಗಿರುವ ರೈತನ ಪರವಾಗಿ ಸದಾ ನಿಲ್ಲುತ್ತೇವೆ. ಹಿಂದೆಯೂ ಹೋರಾಡಿದ್ದೇವೆ ಇಂದೂ ಬೆಂಬಲಿಸಿದ್ದೇವೆ. ಮುಂದೆಯೂ ಬೆಂಬಲಿಸಿ ಹೋರಾಡುತ್ತೇವೆ ಎಂದರು.