ಬೆಂಗಳೂರು:ಸುಡಾನ್‌ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷದಲ್ಲಿ ಓರ್ವ ಭಾರತೀಯ ಸೇರಿದಂತೆ 185 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಿಕ್ಕಿಬಿದ್ದ ಭಾರತೀಯರ ಪೈಕಿ 31 ಮಂದಿ ಕನ್ನಡಿಗರೂ ಇದ್ದಾರೆ. ಅವರನ್ನು ಅಲ್ಲಿಂದ ಕರೆತರುವ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ವಿದೇಶಾಂಗ ಸಚಿವ ಜೈಶಂಕರ್ ನಡುವೆ ಟ್ವೀಟ್ನಲ್ಲಿ ಮಾತಿನ ಚಕಮಕಿ ನಡೆದಿದೆ.
ಮೊದಲು ಸಿದ್ದರಾಮಯ್ಯ ಅವರು, "ಸುಡಾನ್‌ನಲ್ಲಿ ಸಿಲುಕಿರುವ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ 31 ಜನರನ್ನು ಸುರಕ್ಷಿತವಾಗಿ ವಾಪಸ್ ದೇಶಕ್ಕೆ ಕರೆ ತನ್ನಿ" ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜಯಶಂಕರ್ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈಶಂಕರ್, ಈ ವಿಷಯದ ರಾಜಕೀಕರಣದ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. "ಸುಡಾನ್ ರಾಜಧಾನಿ ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಏಪ್ರಿಲ್ 14 ರಿಂದಲೇ ಭಾರತೀಯರ ರಕ್ಷಣೆಗೆ ಕ್ರಮ ಕೈಗೊಂಡಿದೆ. ಎಲ್ಲ ಭಾರತೀಯರ ಜೊತೆ ಸಂಪರ್ಕ ಸಾಧಿಸಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ ಸುಡಾನ್‌ನಲ್ಲಿರುವ ಭಾರತೀಯರು ಪಿಐಒಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ನಿಮ್ಮ ಟ್ವೀಟ್ ನೋಡಿ ನಮಗೆ ಗಾಬರಿಯಾಗಿದೆ. ಇದರಲ್ಲೂ ರಾಜಕಾರಣ ಮಾಡುವುದು ಬೇಡ" ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಉತ್ತರವಾಗಿ ಮತ್ತೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನೀವೇ ಸಹಾಯ ಮಾಡಿ ಅಥವಾ ಸಾಧ್ಯವಿರುವವರಿಗೆ ಸೂಚಿಸಿ ಎಂದು ಹೇಳಿದ್ದಾರೆ. "ನನ್ನ ಟ್ವೀಟ್ ನೋಡಿ ನೀವು ಗಾಬರಿಗೊಂಡಿದ್ದರೆ, ದಯವಿಟ್ಟು ನಮ್ಮ ಜನರನ್ನು ಮರಳಿ ಕರೆತರಲು ನಮಗೆ ಸಹಾಯ ಮಾಡುವ ಸೂಕ್ತ ವ್ಯಕ್ತಿಯನ್ನು ಸೂಚಿಸಿ, ಅವರಿಗೆ ನಾವು ಮನವಿ ಮಾಡುತ್ತೇವೆ" ಎಂದಿದ್ದಾರೆ.