ಕರ್ನಾಟಕ

karnataka

By

Published : Mar 3, 2021, 4:43 PM IST

ETV Bharat / state

ಹೈಕಮಾಂಡ್ ಮನವೊಲಿಕೆ ಯತ್ನ ಸಫಲ: ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತೆ ಬಲ ವೃದ್ಧಿಸಿಕೊಂಡ ಸಿದ್ದರಾಮಯ್ಯ

ಪಕ್ಷದಲ್ಲಿ ಮತ್ತೊಮ್ಮೆ ತಾವು ಎಲ್ಲರಿಗಿಂತ ಪ್ರಬಲ ಎಂಬುವುದನ್ನು ಸಿದ್ದರಾಮಯ್ಯ ದೃಢಪಡಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ತಮ್ಮನ್ನೇ ಅವಲಂಬಿಸಿ ಪಕ್ಷದ ಬೆಳವಣಿಗೆ ಹಾಗೂ ಚಟುವಟಿಕೆ ನಡೆಯುವಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

Siddaramaiah's persuasion from Congress high command is success
ಹೈಕಮಾಂಡ್​ನಿಂದ ಸಿದ್ದರಾಮಯ್ಯ ಮನವೊಲಿಕೆ ಯತ್ನ ಸಫಲ

ಬೆಂಗಳೂರು : ಮೈಸೂರು ಮೇಯರ್​ ಆಯ್ಕೆಗೆ ಸಂಬಂಧಪಟ್ಟಂತೆ ಅಸಮಧಾನಗೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮನವೊಲಿಸುವ ಕಾರ್ಯಕ್ಕೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಶಾಸಕ ತನ್ವೀರ್ ಸೇಠ್​ ವಿರುದ್ಧ ಕ್ರಮ ಕೈಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

ದೇವರಾಜ ಅರಸು ಅವರ ನಂತರ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯ, ಹೆಚ್ಚಿನ ಕಾಂಗ್ರೆಸ್ ಶಾಸಕರ ಒಲವು ಹೊಂದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿರುದ್ಧ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂಬ ಆರೋಪ ಸಿದ್ದರಾಮಯ್ಯ ವಿರುದ್ದ ಕೇಳಿಬರುತ್ತಿದೆ.

ಇದಕ್ಕೆ ಪುಷ್ಠಿ ನೀಡುವ ರೀತಿ ಮೈಸೂರು ಮೇಯರ್ ಆಯ್ಕೆಯಲ್ಲಿ ಕಾಂಗ್ರೆಸ್​ಗೆ ಆದ ಹಿನ್ನಡೆ ಹಾಗೂ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಕಾರ್ಯತಂತ್ರ ರೂಪಿಸಿ, ಅವರ ವಿರೋಧಿಗಳನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಒಂದು ಹಂತಕ್ಕೆ ಸಿದ್ದರಾಮಯ್ಯರನ್ನು ತೀವ್ರ ಮುಜುಗರಕ್ಕೆ ಹಾಗೂ ಬೇಸರಕ್ಕೆ ಈಡು ಮಾಡಿತ್ತು. ಇದರಿಂದ ಆಕ್ರೋಶಗೊಂಡಿದ್ದ ಅವರು, ಪಕ್ಷದ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಿಂದ ದೂರವಿರುವುದಾಗಿ ಆಪ್ತರಲ್ಲಿ ಹೇಳಿಕೊಂಡಿದ್ದರು ಎನ್ನಲಾಗ್ತಿದೆ. ಇದರಿಂದ ದಿಢೀರ್ ಒತ್ತಡಕ್ಕೆ ಒಳಗಾದ ಕಾಂಗ್ರೆಸ್ ಹೈಕಮಾಂಡ್, ರಾಜ್ಯದಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ ಎಂಬ ಸಂದೇಶ ಜನರಿಗೆ ತಲುಪಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಲಿದೆ ಹಾಗೂ ಬಿಜೆಪಿಗೆ ಮುಂಬರುವ ದಿನಗಳಲ್ಲಿ ಬೆಳವಣಿಗೆ ಸಾಧಿಸಲು ಅನುಕೂಲವಾಗಲಿದೆ ಎಂಬ ವಿಚಾರವನ್ನು ಅರಿತು ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಒಂದೆಡೆ ಡಿ.ಕೆ ಶಿವಕುಮಾರ್​ಗೆ ಸೂಚನೆ ನೀಡಿ ಮಾತುಕತೆ ನಡೆಸುವಂತೆ ತಿಳಿಸಿದ್ದು, ನಿನ್ನೆ ಸಿದ್ದರಾಮಯ್ಯ ನಿವಾಸಕ್ಕೆ ಡಿಕೆಶಿ ಆಗಮಿಸಿ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಮಾತುಕತೆ ಸಫಲವಾದ ಹಿನ್ನೆಲೆ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ. ಮತ್ತೊಂದೆಡೆ ಹೈಕಮಾಂಡ್ ಪರವಾಗಿ ಸಿದ್ದರಾಮಯ್ಯ ಬಳಿ ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿ ಗೌಡ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಕಳೆದ ಒಂದೆರಡು ವಾರಗಳಿಂದ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕರ ನಡುವಿನ ಆಂತರಿಕ ಸಮರ ಬಹುತೇಕ ಕೊನೆಗೊಂಡಿದೆ.

ಇದೀಗ ಮೈಸೂರು ಮೇಯರ್ ಆಯ್ಕೆಯಲ್ಲಿ ಕಾಂಗ್ರೆಸ್​ಗೆ ಹಿನ್ನೆಡೆ ಆಗಿರುವಲ್ಲಿ ಸಿದ್ದರಾಮಯ್ಯ ವರ್ಚಸ್ಸು ಕುಂದಿಸುವ ಉದ್ದೇಶವೇ ಇದೆ ಎಂಬ ಅಂಶ ಮನಗಂಡಿರುವ ಹೈಕಮಾಂಡ್, ಉಸ್ತುವಾರಿ ವಹಿಸಿಕೊಂಡಿದ್ದ ತನ್ವೀರ್ ಸೇಠ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ತನ್ವೀರ್ ವಿರುದ್ಧ ಕ್ರಮ ಆಗುವವರೆಗೂ ತಾವು ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದು, ಹೀಗಾಗಿ ತರಾತುರಿಯಲ್ಲಿ ಹೈಕಮಾಂಡ್ ಮಧು ಯಕ್ಷಿ ಗೌಡರನ್ನು ರಾಜ್ಯಕ್ಕೆ ಕಳಿಸಿ ತನಿಖೆ ನಡೆಸುವ ಕಾರ್ಯ ಮಾಡಿದೆ.

ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಮಧು ಯಕ್ಷಿ ಗೌಡ, ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಚರ್ಚೆ ನಡೆಸಿದ ನಂತರ ಮೈಸೂರಿಗೆ ತೆರಳಿ ಅಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಪಾಲಿಕೆ ಸದಸ್ಯರ ಜೊತೆ ಚರ್ಚಿಸಿ ವಸ್ತು ಸ್ಥಿತಿ ಅರಿಯುವ ಪ್ರಯತ್ನ ಮಾಡಿದ್ದಾರೆ. ಇಂದು ಬೆಳಗ್ಗೆ ನೇರವಾಗಿ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ಕೊಟ್ಟು, ಅಲ್ಲಿ ಸಮಾಲೋಚಿಸಿದ ವಿಚಾರಗಳ ಕುರಿತು ಮಾಹಿತಿ ಒದಗಿಸಿದ್ದಾರೆ. ಈ ಸಂದರ್ಭ ಕೂಡ ತನ್ವೀರ್ ಸೇಠ್​ ವಿರುದ್ಧ ಕ್ರಮದ ಭರವಸೆಯನ್ನು ಅವರುನೀಡಿದ್ದು, ಇವೆಲ್ಲದರ ಪರಿಣಾಮ ಸಿದ್ದರಾಮಯ್ಯ ಕಾಂಗ್ರೆಸ್ ಜಾಥದಲ್ಲಿ ಭಾಗಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಸಿದ್ದರಾಮಯ್ಯ ಬೇಸರಗೊಂಡಿದ್ದು, ಯಾವುದೇ ಕಾರಣಕ್ಕೂ ಇದು ಮುಂದುವರಿಯದಂತೆ ನೋಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಪ್ರಕರಣವನ್ನು ತೀರಾ ಗಂಭಿರವಾಗಿ ಪರಿಗಣಿಸಿದೆ. ಒಂದು ವೇಳೆ ಸಿದ್ದರಾಮಯ್ಯ ಅವರೇನಾದರೂ ಮುನಿಸಿಕೊಂಡು ಪಕ್ಷದಿಂದ ದೂರವಾದರೆ ಅಥವಾ ತಟಸ್ಥರಾದರೆ ಅದರಿಂದ ಆಗುವ ನಷ್ಟದ ಅಂದಾಜಿಸಿರುವ ಹೈಕಮಾಂಡ್, ತುರ್ತು ಕ್ರಮಕ್ಕೆ ಮುಂದಾಗಿದೆ.

ಒಟ್ಟಾರೆ, ಪಕ್ಷದಲ್ಲಿ ಮತ್ತೊಮ್ಮೆ ತಾವು ಎಲ್ಲರಿಗಿಂತ ಪ್ರಬಲ ಎಂಬುವುದನ್ನು ಸಿದ್ದರಾಮಯ್ಯ ದೃಢಪಡಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ತಮ್ಮನ್ನೇ ಅವಲಂಬಿಸಿ ಪಕ್ಷದ ಬೆಳವಣಿಗೆ ಹಾಗೂ ಚಟುವಟಿಕೆ ನಡೆಯುವಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ABOUT THE AUTHOR

...view details