ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದ ಸಾಗರದಲ್ಲಿ ದಾಖಲಾಗಿರುವ ಎಫ್ಐಆರ್ ವಿರುದ್ಧ ಕಿಡಿಕಾರಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೂಡಲೇ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದ ಅವರು, ನಮ್ಮ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ವಿರುದ್ಧ ದುರುದ್ದೇಶದಿಂದ ಎಫ್ಐಆರ್ ದಾಖಲಿಸಿದ, ಸಾಗರದ ಪೊಲೀಸ್ ಅಧಿಕಾರಿ ಹದ್ದು ಮೀರಿ ವರ್ತಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಅನಗತ್ಯ ರಾಜಕೀಯ ಸಂಘರ್ಷಕ್ಕೆ ಅವಕಾಶ ನೀಡದೆ ತಕ್ಷಣ ಈ ಎಫ್ಐಆರ್ ರದ್ದುಪಡಿಸಿ ಮತ್ತು ಅಧಿಕಾರಿಯನ್ನು ಅಮಾನತ್ತಿನಲ್ಲಿರಿಸಿ ಎಂದಿದ್ದಾರೆ.
ದೇಶದ ಜನರ ದೇಣಿಗೆಯ ಪಿಎಂ ಕೇರ್ಸ್ ಫಂಡ್ ಯಾರೊಬ್ಬರ ಮನೆಯ ಆಸ್ತಿ ಅಲ್ಲ. ಅದು ಈ ದೇಶದ ಪ್ರಜೆಗಳ ದುಡ್ಡು. ಅದು ಸದುಪಯೋಗವಾಗಬೇಕು ಎಂದು ಹೇಳುವ ಅಧಿಕಾರ ಪ್ರತಿಯೊಬ್ಬರಿಗೆ ಇದೆ. ಅದನ್ನೇ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳು ಕಾರ್ಯಕರ್ತರ ಮೇಲೆ ಅಲ್ಲಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸುತ್ತಿರುವುದು ನಡೆದಿದೆ ಎಂದು ಆರೋಪಿಸಿದರು.
ಈ ರೀತಿ ನಮ್ಮ ಬಾಯಿ ಮುಚ್ಚಿಸಬಹುದು ಎಂದು ತಿಳಿದುಕೊಂಡಿದ್ದರೆ, ಅದು ಮೂರ್ಖತನ. ಮುಂದಿನ ದಿನಗಳಲ್ಲಿ ನಮ್ಮ ಪ್ರಶ್ನೆಗಳು ಇನ್ನಷ್ಟು ಹರಿತವಾಗಲಿದೆ. ಈ ಸಂಘರ್ಷ ಇನ್ನಷ್ಟು ಬಿರುಸು ಪಡೆಯಲಿದೆ ಎಂದು ಎಚ್ಚರಿಸಿದ್ದಾರೆ.